ಗದಗ: ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದು ಪಕ್ಕಾ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿ ಜಿಲ್ಲಾ ಕಾರ್ಯಾಲಯದ ಮುಂದೆ ಮಾತನಾಡಿದ ಅವರು, ಬಿಜೆಪಿ ವಿಶ್ವನಾಥ್ ಅವರನ್ನು ಕೈಬಿಟ್ಟಿದೆಯಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ವಿಶ್ವನಾಥ್ ಅನಾಥರಲ್ಲ. ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಬಂದಂತವರಿಗೆ ಒಂದೊಂದು ಅವಕಾಶ ಸಿಕ್ಕಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗುತ್ತದೆ. ಪ್ರಸ್ತುತ ಹತ್ತು ಜನರಿಗೆ ಒಂದೇ ಬಾರಿ ಅವಕಾಶ ನೀಡಿದ್ದಾರೆ. ಈಗ ಎಂಟಿಬಿ ನಾಗರಾಜ್ ಹಾಗೂ ಶಂಕರ್ಗೆ ಸಿಕ್ಕಿದೆ.
ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲರಿಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತದೆ. ವಿಶ್ವನಾಥ್ ಅವರಿಗೂ ಸಿಎಂ ಯಡಿಯೂರಪ್ಪ ಎಂಎಲ್ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಕೂಡ ಇಲ್ಲ ಅನ್ನುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ ಎಂದರು.
ವಿಶ್ವನಾಥ್ ಅವರಿಗೆ ಅವಕಾಶ ತಪ್ಪಲಿಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಶೇಖರ್, ಇದೆಲ್ಲವೂ ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಯಾವಾಗಲೂ ವಿಶ್ವನಾಥ್ ಅವರ ಜೊತೆಗಿರುತ್ತೆ ಎಂದರು.