ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿರುವ ಕೆರೆಗೆ ನೀರು ಬಿಡುವ ಬದಲು ಪಕ್ಕದಲ್ಲೇ ಇರುವ ಪೊಲೀಸ್ ಹೆಡ್ ಕ್ವಾಟರ್ಸ್ ನಿಂದ ಕೊಳವೆಯ ಮೂಲಕ ಕೊಳಚೆ ನೀರು ಬಿಡಲಾಗ್ತಿದೆ. ಇದು ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ಎರಡು ವರ್ಷಗಳ ಹಿಂದೆ 20 ಎಕರೆ ಜಮೀನಿನಲ್ಲಿ ವಿಸ್ತಾರವಾಗಿ ಹರಡಿಕೊಂಡು ಇಡೀ ಊರಿಗೇ ನೀರು ಒದಗಿಸಬಲ್ಲ ಈ ಕೆರೆಯ ಹೂಳು ತೆಗೆಸಲಾಗಿತ್ತು. ಎರಡು ಹಂತದಲ್ಲಿ ಸುಮಾರು 1 ಕೋಟಿ ರೂಪಾಯಿ ಹಣ ಖರ್ಚು ಮಾಡಿ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಇಷ್ಟೆಲ್ಲ ಖರ್ಚು ಮಾಡಿ ರೂಪ ನೀಡಿದ ನಂತರ ಇದಕ್ಕೆ ಶುಚಿಯಾದ ನೀರು ಹರಿಸುವ ಬದಲು ಪಕ್ಕದಲ್ಲಿರುವ ಪೊಲೀಸ್ ಕ್ವಾಟರ್ಸ್ ನಿಂದ ಬರುವ ಕೊಳಚೆ ನೀರನ್ನು ಕೆರೆಗೆ ಬಿಡಲಾಗ್ತಿದೆ.
ಅತ್ತ ಪೊಲೀಸ್ ಕ್ವಾಟರ್ಸ್ ನ ಮೋರಿಯಿಂದ ಬರುವ ನೀರನ್ನು ಕೆರೆಗೆ ಸೇರಿಸುವ ಚರಂಡಿಯನ್ನೂ ಪೂರ್ಣವಾಗಿ ನಿರ್ಮಾಣ ಮಾಡಿಲ್ಲ. ಅದನ್ನೂ ಅರ್ಧಂಬರ್ದ ಮಾಡಿದ್ದಾರೆ. ಇದರಿಂದಾಗಿ ಅರ್ಧದಲ್ಲಿಯೇ ಗುಂಡಿಯಲ್ಲಿ ಮೋರಿ ನೀರು ನಿಂತು ಪಕ್ಕದಲ್ಲಿನ ಮನೆಗಳಿಗೆ ತೊಂದರೆ ಉಂಟಾಗಿದೆ. ಕೊಳಚೆ ನೀರಿನ ದುರ್ವಾಸನೆಯಿಂದಾಗಿ ನಿತ್ಯ ಜನ ಕಂಗಾಲಾಗಿದ್ದಾರೆ. ಹಾಗಾಗಿ ಕೆರೆಗೆ ಸೇರುವ ಮೋರಿ ನಿಲ್ಲಿಸಿ ಕೆರೆಯ ಸ್ಥಿತಿ ಸುಧಾರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.
ಈ ಸಂಬಂಧ ಅಸುಂಡಿ ಗ್ರಾಮ ಪಂಚಾಯತಿ ಪಿಡಿಒ ಕೊಪ್ರದ ಅವರು ಕೆರೆಯನ್ನು ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ, ಈವರೆಗೂ ಇನ್ನೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಗ್ರಾಮದ ಜನರ ನರಕಯಾತನೆ ಅನುಭವಿಸುತ್ತಿದ್ದಾರೆ.