ಗದಗ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಿದ ಬಿಜೆಪಿ ಮುಖಂಡನನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕೋವಿಡ್ ನಿಯಮಗಳನ್ನು ಮೀರಿ, ಯಾವುದೇ ಪರಿವಾನಿಗೆ ಪಡೆಯದೇ ಬರ್ತಡೇ ಪಾರ್ಟಿ ಮಾಡಿದ್ದ ಬಿಜೆಪಿ ಮುಖಂಡ ಹಾಗೂ ರಾಮಲು ಆಪ್ತ ಎಸ್ ಹೆಚ್ ಶಿವನಗೌಡ ಅವರನ್ನು ಬಿಜೆಪಿಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿದ ಗದಗ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, 'ಕೋವಿಡ್ ಸಂದರ್ಭದಲ್ಲಿ ನಗರದ ರಿಂಗ್ ರೋಡನಲ್ಲಿರುವ ಶ್ರೀನಿವಾಸ್ ಭವನದಲ್ಲಿ ನಿಮ್ಮ ನೂರಾರು ಆಪ್ತರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಮೋಜು, ಮಸ್ತಿ ಮಾಡಿದ್ದಲ್ಲದೇ, ಆಚರಣೆಯಲ್ಲಿ ಪಾಲ್ಗೊಂಡವರು ಪಾನಮತ್ತರಾಗಿ ಕುಣಿದು ಕುಪ್ಪಳಿಸಿದ ವಿಷಯ ರಾಜ್ಯದ ಎಲ್ಲಾ ದಿನಪತ್ರಿಕೆ, ಟಿ.ವಿ.ಮಾಧ್ಯಮದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ವಿಚಾರ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದ್ದು, ತಮ್ಮ ಈ ವರ್ತನೆಯಿಂದ ಪಕ್ಷದ ಹಾಗೂ ಪಕ್ಷದ ನಾಯಕರು ಸಾಕಷ್ಟು ಮುಜುಗುರಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಪಕ್ಷವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಮ್ಮನ್ನು ಪಕ್ಷದಿಂದ ಅಮಾನತುಗೊಳಿಸಿದೆ' ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ಇದೇ ಸುದ್ದಿಯನ್ನು ಮೊದಲು 'ಈಟಿವಿ ಭಾರತ'ದಲ್ಲಿ ದಿನಾಂಕ 11 ರಂದು "ಕೊರೊನಾ ನಡುವೆಯೂ ಶ್ರೀ ರಾಮಲು ಆಪ್ತ ಸಹಾಯಕ ಬರ್ತಡೆ ಪಾರ್ಟಿ" ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರವಾಗಿತ್ತು ಅದು ಸಹ ಗದಗ ಬಿಜೆಪಿ ಜಿಲ್ಲಾ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು.