ಗದಗ: ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಪಿಎಸ್ಐ ಕಮಲಾ ದೊಡ್ಡಮನಿ ಅವರು ಕಪಾಳ ಮೋಕ್ಷ ಮಾಡಿರುವ ಘಟನೆ ಇಲ್ಲಿನ ಭೂಮರಡ್ಡಿ ಸರ್ಕಲ್ನಲ್ಲಿ ನಡೆದಿದೆ.
ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ ಬೈಕ್ ಸೇರಿದಂತೆ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಮಾರುಕಟ್ಟೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕು ಎಂದು ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ. ಆದರೂ ಜನಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ತಮ್ಮ ತಪ್ಪು ಮುಂದುವರೆಸುತ್ತಿದ್ದಾರೆ. ಹಾಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಹೀಗೆ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿಯ ರುಚಿ ತೋರಿಸುತ್ತಿದ್ದಾರೆ. ವಾಹನಗಳನ್ನೂ ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಕೇಳಿದರೆ ನಾನು ಕಾಂಟ್ರಾಕ್ಟರ್, ಹಳ್ಳಿಯಿಂದ ಬರಬೇಕು ಎಂದು ವಾದಿಸಿದ್ದಾನೆ. ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್ಐ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಬೈಕ್ ಸವಾರ ವಾಗ್ವಾದ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಭೂಮರಡ್ಡಿ ಸರ್ಕಲ್, ಮಹೇಂದ್ರಕರ ಸರ್ಕಲ್ಗಳಲ್ಲಿ ಸುಮಾರು 50ಕ್ಕೂ ಅಧಿಕ ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದಿರುವ ವ್ಯಾಪಾರಸ್ಥರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.