ಗದಗ: ಗದಗ ಜಿಲ್ಲೆಯಲ್ಲಿ ಹತ್ತು ಸಾವಿರ ಜನ ಮತಾಂತರ ಆಗಿದ್ದಾರೆ. ಹಾಗಾಗಿ ಎಲ್ಲಾ ಸಮಾಜದ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ನಿನ್ನೆ ನಗರದ ವೀರನಾರಾಯಣ ದೇವಸ್ಥಾನದಿಂದ ಮುನ್ಸಿಪಲ್ ಕಾಲೇಜಿನವರೆಗೆ ಹಿಂದೂ ಜಾಗೃತಿಗಾಗಿ ಗಣವೇಷಧಾರಿಗಳ ಪಂಥ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದಗದಲ್ಲಿ ಶ್ರೀರಾಮ ಮಂದಿರ ಮಾದರಿಯಲ್ಲಿ ನಿರ್ಮಿಸಿದ್ದ ಹಿಂದೂ ದೇವಾಲಯವೊಂದನ್ನು ಕೆಡವಿ ಜುಮ್ಮಾ ಮಸೀದಿ ಕಟ್ಟಲಾಗಿದೆ ಎಂದು ಮುತಾಲಿಕ್ ಇದೇ ವೇಳೆ ಆರೋಪಿಸಿದ್ದಾರೆ. ಮತಾಂತರ ಹಿನ್ನೆಲೆಯಲ್ಲಿ ಕ್ರೈಸ್ತ ಪಾದ್ರಿಗಳ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಅವರು, ಮತಾಂತರ ತಡೆಯಲು ಶ್ರೀರಾಮ ಸೇನೆ ಹೊಸ ಪಡೆಯನ್ನೇ ಸೃಷ್ಟಿಸಿದೆ. ಕ್ರಿಶ್ಚಿಯನ್ನರು ಹಿಂದುಗಳನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ನಮ್ಮ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
'ಗದಗ ನಗರದ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ. ಟಿಪ್ಪು ಸುಲ್ತಾನ್ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಆಗಿದೆ. ಇದಕ್ಕೆ ದಾಖಲೆ ಇವೆ. ಇದನ್ನು ಮರಳಿ ನಮಗೆ ಕೊಡಬೇಕು. ನಾವು ಸೌಹಾರ್ದತೆಯಿಂದ ಇರಬೇಕಾದ್ರೆ ನ್ಯಾಯಯುತವಾಗಿ ದೇವಸ್ಥಾನವನ್ನು ನಮಗೆ ಬಿಟ್ಟು ಕೊಡಬೇಕು. ಈ ವಿಚಾರ ಪ್ರಸ್ತಾಪಿಸಿದವರನ್ನು ಗಡಿಪಾರು ಮಾಡ್ತಿದ್ದೀರಿ. ಮೊದಲು ಈ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿದವರನ್ನು ಗಡಿಪಾರು ಮಾಡಿ' ಅಂತ ಅವರು ಕಿಡಿಕಾರಿದರು.
'ಗದಗ ಜಿಲ್ಲೆಯಲ್ಲಿ 10 ಸಾವಿರ ಜನ ಮತಾಂತರ ಆಗಿದ್ದಾರೆ. ಹಾಗಾಗಿ ಎಲ್ಲಾ ಸಮಾಜದ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ನಿಮ್ಮ ಸಮಾಜದವರು ಯಾರೂ ಉಳಿಯುವುದಿಲ್ಲ. ಎಲ್ಲಾ ಶಾಸಕರು ಈಗ ಮತಾಂತರ ಆಗುತ್ತಿದೆ ಅಂತಾ ಹೇಳುತ್ತಿದ್ದಾರೆ. ಆದರೆ ಇಷ್ಟು ದಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ರಿ' ಎಂದು ಪ್ರಶ್ನಿಸಿದರು.