ಗದಗ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ನೀವು ನರೇಂದ್ರ ಮೋದಿ ವಿರುದ್ಧ ಎಷ್ಟೇ ಮಾತುಗಳನ್ನಾದರೂ ಜನತೆಯ ಮತಗಳು ಬಿಜೆಪಿಗೆ ಬಂದೇ ಬರುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೋದಿ ಕೋಟ್ಯಾಂತರ ಜನರನ್ನು ಸಾಲದಿಂದ ಮುಕ್ತ ಮಾಡುತ್ತಿದ್ದಾರೆ. ಖರ್ಗೆ ಅವರು ಮೋದಿ ಅವರಿಗೆ ಆಡಿದ ಮಾತುಗಳು ನಿಮ್ಮ ಮನ ನೋಯಿಸಿದೆ. ಅವರಿಗೆ ಜನತೆ ಬುದ್ಧಿ ಕಲಿಸಬೇಕು ಎಂದರು.
ಖರ್ಗೆ ಅವರೇ ನಿಮ್ಮ ಹೇಳಿಕೆಯಿಂದ ನಿಮಗೆ ಯಾವುದೇ ಲಾಭ ಆಗುವುದಿಲ್ಲ. ನಿಮಗೆ ಜನತೆ ಅಧಿಕಾರ ಕೊಟ್ಟಾಗ ಕರ್ನಾಟಕವನ್ನು ದಿಲ್ಲಿಯ ಎಟಿಎಂ ಮಾಡಿಕೊಂಡ್ರಿ, ಲಿಂಗಾಯತ ಸಮಾಜದ ವಿರೋಧ ಮಾಡಿದವರು ಕಾಂಗ್ರೆಸ್, ರಾಹುಲ್ ಗಾಂಧಿ ಅವರೇ ನಿಮ್ಮ ಹಿಂದೆ ಇರುವ ನಾಯಕರು ನಿಮಗೆ ಲಾಭ ತರುವುದಿಲ್ಲ. ಅವರು ಆಡುವ ಮಾತುಗಳು ಬಿಜೆಪಿಗೆ ಹೆಚ್ಚಿನ ಮತಗಳನ್ನು ತಂದು ಕೊಡುತ್ತೆ. ನೀವು ನರೇಂದ್ರ ಮೋದಿಯವರಿಗೆ ಎಷ್ಟು ಟೀಕಿಸುತ್ತಿರೋ ಅಷ್ಟು ಬಿಜೆಪಿಗೆ ಮತ ಬರುತ್ತೆ ಹಾಗೂ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತವೆ ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರ ಮತ್ತು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ರೈತರ ಏಳಿಗೆಗಾಗಿ ಶ್ರಮ ವಹಿಸಿದೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸರ್ಕಾರ ಇದೆ. ಸಂವಿಧಾನದಲ್ಲಿ ಮೀಸಲಾತಿ ದಲಿತರಿಗೆ ಸಿಗುತ್ತೆ. ಎಸ್ಸಿ, ಎಸ್ಟಿ, ಲಿಂಗಾಯತ, ಒಕ್ಕಲಿಗ ಮಿಸಲಾತಿ ಹೆಚ್ಚಿಸಲಾಗಿದೆ. ಮುಸ್ಲಿಂ ಅವರಿಗೆ ನಮ್ಮ ಬಿಜೆಪಿ ಸರ್ಕಾರ ಮೀಸಲಾತಿ ರದ್ದುಪಡಿಸಿತು. ಆದರೆ, ಕಾಂಗ್ರೆಸ್ ಪಕ್ಷದವರು ಮತ್ತೆ ಮುಸ್ಲಿಂರ ಮೀಸಲಾತಿ ಮರಳಿ ಕೊಡುತ್ತೇವೆ ಅಂತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದವರು ದಲಿತರಿಗಾಗಿ, ಬಡವರಿಗಾಗಿ ಏನು ಮಾಡಿದ್ದೀರಿ?. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದೀರಿ? ಅನ್ನೋದು ದೇಶದ ಜನರ ಪ್ರಶ್ನೆಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು 70 ವರ್ಷಗಳಿಂದ ನಿರಾಕರಿಸಿದರು. ಆದರೆ, ನರೇಂದ್ರ ಮೋದಿ ಅವರು ರಾಮ ಮಂದಿರ ಕಟ್ಟಲು ಪ್ರಾರಂಭಿಸಿದರು. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ದುಡಿಯುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಕಳಸಾ ಬಂಡೂರಿಗಾಗಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈ ಹಿಂದೆ ಗೋವಾ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ರೂ ಮಹದಾಯಿ ಸಮಸ್ಯೆ ಬಗೆಹರಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಮಹದಾಯಿ ಸಮಸ್ಯೆ ಬಗೆಹರಿದಿದೆ. ಕೃಷ್ಣ, ಭದ್ರಾ ಮೇಲ್ದಂಡೆ ಯೋಜನೆಯನ್ನೂ ಸಹ ನಾವು ಬಗೆಹರಿಸುತ್ತಿದ್ದೇವೆ ಎಂದು ಹೇಳಿದರು
ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ಬಿಜೆಪಿ ಕಿತ್ತುಹಾಕಿದೆ: ಓಟ್ ಬ್ಯಾಂಕ್ಗಾಗಿ ಕಾಂಗ್ರೆಸ್, ಜೆಡಿಎಸ್ ಪಿಎಫ್ಐ ಬ್ಯಾನ್ ಮಾಡದೆ ಸುಮ್ನಿದ್ರು. ಪಿಎಫ್ಐ ಬ್ಯಾನ್ ಮಾಡಲು ಧೈರ್ಯ ತೋರಿದ್ದು ಬಿಜೆಪಿ. ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು. ಆದರೆ, ಬಿಜೆಪಿ ಅದನ್ನು ಕಿತ್ತುಹಾಕಿತು. ಈಗ ಕಾಂಗ್ರೆಸ್ನವರು ಮರಳಿ ಮೀಸಲಾತಿಯನ್ನೂ ಮುಸ್ಲಿಮರಿಗೆ ನೀಡ್ತೇವೆ ಅಂತಾರೆ. ಕಾಂಗ್ರೆಸ್ ಪಕ್ಷ ತುಷ್ಠೀಕರಣ ರಾಜನೀತಿ ಮಾಡು ತ್ತಿದೆ ಎಂದು ಟೀಕಿಸಿದರು.
ರಾಮಣ್ಣ ಲಮಾಣಿಗೆ ಶಾ ಧನ್ಯವಾದ: ಇದೇ ವೇಳೆ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಅವರು ಅಮಿತ್ ಶಾ ಸಮ್ಮುಖದಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಕಾಲಿಗೆ ನಮಸ್ಕರಿಸಿದರು. ಆಗ ಹೊಸ ಮುಖಕ್ಕೆ ಟಿಕೆಟ್ ನೀಡುವ ಬಿಜೆಪಿ ನಿರ್ಧಾರಕ್ಕೆ ರಾಮಣ್ಣ ಲಮಾಣಿ ಬೆಂಬಲಿಸಿದ್ದಾರೆ. ಹೀಗಾಗಿ ನಾವು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅಮಿತ್ ಶಾ ತಿಳಿಸಿದರು.
ಅಲ್ಲದೇ, ನಾನು ಕನ್ನಡದಲ್ಲಿ ಮಾತನಾಡ್ತಿಲ್ಲ. ಹೀಗಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳ್ತೇನೆ. ಚಂದ್ರು ಲಮಾಣಿ ಅವರನ್ನು ಗೆಲ್ಲಿಸಲು ನಾನು ಬಂದಿದ್ದೇನೆ. ನೀವು ಚಂದ್ರು ಲಮಾಣಿ ಗೆಲ್ಲಿಸ್ತೀರಲ್ವಾ?. ನೀವು ಯಾರನ್ನೋ ಶಾಸಕನನ್ನಾಗಿ ಮತ ಹಾಕಬೇಡಿ, ಯಾರನ್ನೋ ಸಿಎಂ, ಮಂತ್ರಿ ಮಾಡಲು ಹಾಕಬೇಡಿ. ಕರ್ನಾಟಕವನ್ನ ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿಯನ್ನು ಬಲಪಡಿಸಲು ನಿಮ್ಮ ಮತ ಹಾಕಿ. ಸ್ಥಿರ ಸರ್ಕಾರ ರಚನೆ ಮಾಡಲು ಅವಕಾಶ ಕೊಡಿ ಅಂತಾ ಕೇಳಲು ಶಿರಹಟ್ಟಿಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ : ನಾಳೆ ರಾಜ್ಯ ರಾಜಧಾನಿಯಲ್ಲಿ ಪ್ರಧಾನಿ ಮೆಗಾ ರೋಡ್ ಶೋ: ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ