ಗದಗ: ಜನನಿಬಿಡ ದೇವಸ್ಥಾನಗಳಲ್ಲಿ ಭಕ್ತರ ಪರ್ಸ್, ಬ್ಯಾಗ್ ಕಳ್ಳತನ ಮಾಡ್ತಿದ್ದ ಗದಗ ಮೂಲದ ತಂಡವೊಂದನ್ನು ಮಂಗಳೂರಿನ ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗದಗ ಬೆಟಗೇರಿಯ ಕುಷ್ಟಗಿಚಾಲ ನಿವಾಸಿ ಯಮುನವ್ವ ಮುತ್ತಪ್ಪ ಛಲವಾದಿ, ಗದಗ ಗಂಗರಪುರ ಪೇಟೆಯ ಪ್ರಕಾಶ ಚೆನ್ನಪ್ಪ ಹೊಳೆಯಮೆಣಸಿಗೆ, ಗದಗ ಸೆಟ್ಲಮೆಂಟ್ ಏರಿಯಾದ ನಿವಾಸಿಗಳಾದ ಶೋಭಾ ನಾಗರಾಜ ಮುಟ್ಟಗಾರ, ಕುಮಾರಮ್ಮ ಮಾರುತಿ ಮುಟ್ಟಗಾರ, ಶಾಂತಮ್ಮ ರಾಮಪ್ಪ ಮೆಟಗಾರ್, ಮತ್ತು ಹುಬ್ಬಳ್ಳಿಯ ಚಂದ್ರಶೇಖರ್ ಶಿವರೆಡ್ಡೆಪ್ಪ ಕರಮುಡಿ ಬಂಧಿತ ಆರೋಪಿಗಳು.
ಇದೇ ಜನವರಿ 12ರಂದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಶೋಧ ಗೌಡರ್ ಎಂಬುವರ ಹ್ಯಾಂಡ್‌ಬ್ಯಾಗ್ ಅನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಆರೋಪಿಗಳು ಪೊಳಲಿ ದೇವಸ್ಥಾನಕ್ಕೆ ತೆರಳುತ್ತಿರುವ ಖಚಿತ ಮಾಹಿತಿಯಂತೆ ಅಡ್ಡೂರ್ ಚೆಕ್‌ಪೋಸ್ಟ್ ಬಳಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗೊಳಪಡಿಸಿದ ವೇಳೆ ವೇಳೆ, ಗೋವಾದ ಶಾಂತದುರ್ಗಾ ದೇವಸ್ಥಾನ, ಮಂಗೇಶ ದೇವಸ್ಥಾನ, ಗೋಕರ್ಣ ಗಣಪತಿ ದೇವಸ್ಥಾನ, ಇಡಗುಂಜಿ ಗಣಪತಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಶೃಂಗೇರಿ ಶಾರದಾ ದೇವಸ್ಥಾನ ಮತ್ತು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 74 ಸಾವಿರ ರೂ. ಮೌಲ್ಯದ ಏಳು ಮೊಬೈಲ್‌ಗಳು, 21,540 ರೂ. ನಗದು, ಕೃತ್ಯಕ್ಕೆ ಬಳಸಿದ ತೂಫಾನ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.