ಗದಗ: ಬೆಳಗಾವಿ ನಮ್ಮದು ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ವಿರುದ್ಧ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಭು ಚವ್ಹಾಣ್ ಅಜಿತ್ ಪವಾರ್ ಗೆ ತಲೆನೇ ಇಲ್ಲಾ, ಅವನು ಡಬಲ್ ಗೇಮ್ ವ್ಯಕ್ತಿ ಎಂದು ಕಿಡಿ ಕಾರಿದ್ದಾರೆ.
ಗಡಿ ವಿಷಯದಲ್ಲಿ ರಾಜ್ಯದ ಒಂದು ಇಂಚು ಜಾಗವನ್ನು ಬಿಟ್ಟು ಕೊಡಲ್ಲ. ಕರ್ನಾಟಕ ಜಾಗ ನಮ್ಮದು ಅನ್ನುವುದು ದಡ್ಡತನದ ಪರಮಾವಧಿ. ’’ಅಜಿತ್ ಪವಾರ್ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ, ಅವರಿಗೆ ತಲೆ ಇಲ್ಲಾ. ಅವರು ರಾತ್ರೋರಾತ್ರಿ ನಾಯಕನಾದವನು ಅಂತವನ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ’’ ಎಂದು ವಾಗ್ದಾಳಿ ನಡೆಸಿದರು.
ಗಡಿ ಬಗ್ಗೆ ಸಾಂಗ್ಲಿ, ಸೊಲ್ಲಾಪುರಗೆ ಬಂದು ಮಾತನಾಡುತ್ತೇನೆ ಅಂತಿದ್ದಾರೆ. ಧೈರ್ಯವಿದ್ದರೆ ಕರ್ನಾಟಕ ಕ್ಕೆ ಬಂದು ಮಾತನಾಡಲಿ, ಬರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಅದೇ ಅವರ ಉದ್ಯೋಗ. ಮಹಾರಾಷ್ಟ್ರದಲ್ಲೂ ಬರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅವರಿಗೆ ಮಹಾರಾಷ್ಟ್ರ ಜನರೇ ಕಿಮ್ಮತ್ತು ಕೊಡಲ್ಲಾ, ಇನ್ನು ಕರ್ನಾಟಕ ಜನ ಕಿಮ್ಮತ್ತು ಕೊಡಬೇಕಾ ಎಂದು ವ್ಯಂಗ್ಯ ವಾಡಿದರು.