ಗದಗ:ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ವೈದ್ಯರು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ, ಬೆಡ್ ಇಲ್ಲ, ಔಷಧಿ ಲಭ್ಯವಿಲ್ಲ, ಲಂಚ ಕೇಳ್ತಾರೆ ಎಂಬೆಲ್ಲಾ ದೂರುಗಳು ಕೇಳಿ ಬರುತ್ತವೆ. ಆದ್ರೆ ಇಲ್ಲೊಂದೆಡೆ, ಆಸ್ಪತ್ರೆಯಲ್ಲಿ ಮಂಗಗಳ ಕಾಟ ತಪ್ಪಿಸಿ ಎಂದು ರೋಗಿಗಳು ಮನವಿ ಮಾಡಿಕೊಳ್ಳುವಂತಾಗಿದೆ.
ಗದಗ ನಗರದ ಕೆ.ಸಿ.ರಾಣಿ ರಸ್ತೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಗಳ ಅಟ್ಟಹಾಸ ಮಿತಿಮೀರಿದೆ. ನಿತ್ಯವೂ ಆಸ್ಪತ್ರೆಯಲ್ಲಿ ಮಂಗಗಳ ಉಪಟಳಕ್ಕೆ ರೋಗಿಗಳು, ರೋಗಿಗಳ ಸಂಬಂಧಿಕರು ಹೈರಾಣಾಗಿದ್ದಾರೆ. ಸೀದಾ ರೋಗಿಗಳ ವಾರ್ಡ್ಗೆ ನುಗ್ಗಿ ತೊಂದರೆ ಕೊಡುತ್ತಿವೆ ಈ ಕಪಿಗಳು.
ಬಾಣಂತಿಯರು, ಚಿಕ್ಕಮಕ್ಕಳು ಚಿಕಿತ್ಸೆ ಪಡೆಯುವ ವಾರ್ಡ್ಗೆ ಕೋತಿಗಳು ಯಾವುದೇ ಭಯವಿಲ್ಲದೆ ನುಗ್ಗುತ್ತವೆ. ಈ ವೇಳೆ ರೋಗಿಗಳಿಗೆಂದು ತಂದ ಹಣ್ಣು, ಬ್ರೆಡ್, ಬಿಸ್ಕತ್, ಊಟ, ಉಪಹಾರ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಹೊತ್ತೊಯ್ಯುತ್ತವೆ. ಬೆಡ್ಗಳ ಮೇಲೆ ಬಂದು ರೋಗಿಗಳ ಮಧ್ಯೆಯೇ ಜಿಗಿದಾಡಿ ಕಪಿಚೇಷ್ಟೆ ಮೆರೆಯುತ್ತಿವೆ. ಇವುಗಳನ್ನು ಓಡಿಸಲು ಹೋದ್ರೆ ಅವರ ಮೇಲೆ ದಾಳಿಗೆ ಮುಂದಾಗುತ್ತವೆ ಎನ್ನುತ್ತಾರೆ ರೋಗಿಗಳು ಹಾಗೂ ಅವರ ಸಂಬಂಧಿಕರು.
ಹಲವು ದಿನಗಳಿಂದ ಆಸ್ಪತ್ರೆ ಆವರಣದಲ್ಲೇ ಈ ಕೋತಿಗಳ ಹಿಂಡು ಬೀಡುಬಿಟ್ಟಿದೆ. ಇಲ್ಲಿ ಸೆಕ್ಯೂರಿಟಿ ಹಾಗೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಂಗಗಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲದಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದ್ರೂ ತಲೆಕೆಡಿಸಿಕೊಳ್ತಿಲ್ಲ ಎಂಬುದು ಆಸ್ಪತ್ರೆಯವರ ಆರೋಪ.
ಆಸ್ಪತ್ರೆ ಆಡಳಿತ ಮಂಡಳಿಯ ನಿಷ್ಕಾಳಜಿಗೆ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಸ್ಯೆ ಗಂಭೀರವಾಗುವ ಮುನ್ನವೇ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆ ಮಂಗಗಳ ಕಾಟಕ್ಕೆ ಮುಕ್ತಿ ನೀಡಬೇಕಿದೆ.