ಗದಗ: ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಕುರಿತು ಬಿಜೆಪಿ ವಿರುದ್ಧ ಕಿಡಿಕಾರಿದ ಶಾಸಕ ಹೆಚ್.ಕೆ.ಪಾಟೀಲ್ ಅವರು, ಬಿಜೆಪಿಯವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ಶೆಟ್ಟರ್ ಹೇಗೆ ಹೇಳಿದರು?, ಹಾನಿಯಾಗಿದ್ದು ಕಾಂಗ್ರೆಸ್ ಶಾಸಕರ ಮನೆ, ಅವರೇನು ಬಿಜೆಪಿ ಶಾಸಕ ಎಂದು ತಿಳಿದುಕೊಂಡಿದ್ದೀರಾ? ಎಂದು ತಿರುಗೇಟು ನೀಡಿದರು.
ಸರ್ಕಾರದಲ್ಲಿ ಇದ್ದವರು ತನಿಖೆ ಮಾಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಂದ ತನಿಖೆ ಮಾಡಿಸಿ. ನಂತರ ಗಲಭೆಗೆ ಯಾರ ಕೈವಾಡವಿದೆ. ಯಾರು ಕಾರಣರು ಎಂಬುದು ತಿಳಿಯುತ್ತದೆ. ಆಗ ಕಾನೂನು ಕ್ರಮ ತಗೆದುಕೊಳ್ಳಿ. ಅದನ್ನು ಬಿಟ್ಟು ಕಾಂಗ್ರೆಸ್ ಕುಮ್ಮಕ್ಕು ಎಂದು ಹೇಳುವುದು ಎಷ್ಟು ಸರಿ?.
ಕಾಂಗ್ರೆಸ್ ಪಕ್ಷ ಅಂತಹ ಯಾವುದೇ ಘಟನೆಗೆ ಕೈ ಹಾಕುವುದಿಲ್ಲ. ಅಂತಹ ಹೆಜ್ಜೆಗಳನ್ನು ಯಾವಾಗಲೂ ತುಳಿದಿಲ್ಲ ಎಂದು ಸಮರ್ಥಿಸಿಕೊಂಡ ಅವರು, ತಮ್ಮಲ್ಲೇ ಸಾಕಷ್ಟು ವೈಫಲ್ಯಗಳಿವೆ. ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ. ರೈತರಿಗೆ ಯೂರಿಯಾ ಗೊಬ್ಬರ ಕೊಡದಷ್ಟು ಆಸಕ್ತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದಲ್ಲಿ ವೈಮನಸ್ಸುಗಳು ಸಾಕಷ್ಟಿವೆ. ಯಡಿಯೂರಪ್ಪ ಅವರನ್ನು ಇಳಿಸಬೇಕು. ಉಳಿಸಬೇಕು ಎಂಬ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಬೇರೆನೂ ಕಾಣುವುದಿಲ್ಲ. ಏನೇ ಆದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.