ಗದಗ: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿಕೆಗೂ ಗರಂ ಆಗಿದ್ದಾರೆ.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಸ್ತರಿಸಿರುವ ಸಚಿವ ಸಂಪುಟ ನಮಗೆ ಸಂತೋಷ ತಂದಿದೆ. ನೂತನವಾಗಿ ಸಚಿವರಾದರ ತ್ಯಾಗದಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದಲ್ಲಿ ಎಲ್ಲಾ ಸಚಿವರು ಕೂಡಿ ಕೆಲಸ ಮಾಡುತ್ತೇವೆ ಎಂದು ಸಿ.ಸಿ. ಪಾಟೀಲ್ ಹೇಳಿದರು.
ಸಿದ್ದರಾಮಯ್ಯ ಕೂಡ ಸಿಎಂ ಆಗಿದ್ದರು. ಖಾತೆ ಹಂಚಿಕೆ ಸಮಯದಲ್ಲಿ ಸಮಸ್ಯೆಗಳು ಉಂಟಾಗುವ ಬಗ್ಗೆ ಅವರಿಗೂ ಅನುಭವ ಆಗಿದೆ. ಯಾರಿಗೆ ಅವಕಾಶ ನೀಡಬೇಕು, ಯಾರಿಗೆ ನೀಡಬಾರದು ಎಂಬುದು ಅವರ ಪರಮಾಧಿಕಾರ. ಆದರೆ, ಅದನ್ನೇ ಮುಂದಿಟ್ಟುಕೊಂಡು ಯಡಿಯೂರಪ್ಪ ಅಸಮರ್ಥ ಅಂದರೆ ಯಾರೂ ಒಪ್ಪುವುದಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪುವುದಿಲ್ಲ ಎಂದರು.
ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಪ್ರತಿಕ್ರಿಯಿಸಿದ ಪಾಟೀಲ್, ಯಡಿಯೂರಪ್ಪ ಅವರು ಈ ಕುರಿತು ತೀರ್ಮಾನಿಸುತ್ತಾರೆ. ಈ ವಿಚಾರವಾಗಿ ಮಾತನಾಡುವಷ್ಟು ದೊಡ್ಡವನಲ್ಲ ಎಂದರು.
ಬಸವರಾಜ್ ಹೊರಟ್ಟಿ ಅವರ ಗುಂಪುಗಾರಿಕೆ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪಾಟೀಲ್, ಬಿಜೆಪಿಯಲ್ಲಿ ಗುಂಪುಗಾರಿಕೆ ಎಲ್ಲಿದೆ?. ಮಂತ್ರಿ ಮಾಡಿ ಎಂದು ಕೇಳಿದರೆ ತಪ್ಪಾ? ಅದಕ್ಕೆ ಗುಂಪುಗಾರಿಕೆ ಅಂತಾರಾ? ಎಂದು ಪ್ರಶ್ನಿಸಿದರು.