ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕ್ತಾ ಇದ್ದಾರೆ. ಅವರ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಯಾವ ಕಡೆ ಇದ್ದಾರೆ, ಉಳಿದವರು ಯಾವ ಕಡೆ ಇದ್ದಾರೆ ಎನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಪರಮೇಶ್ವರ ಇತ್ತೀಚೆಗೆ ಕಾಣ್ತಾ ಇಲ್ಲ, ಅವರು ಯಾವ ಕಡೆ ಇದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲಿಲ್ಲ, ಮೂರು ಮನೆ ಕೂಡಿಸಿದ್ರೆ ಇನ್ನು ದೊಡ್ಡದು ಮಾಡಿಕೊಳ್ಳುತ್ತೇವೆ ಎಂದು ಟಾಂಗ್ ನೀಡಿದರು.
ಇದೇ ವೇಳೆ ಪಂಚಮಸಾಲಿ ಸಮುದಾಯಕ್ಕೆ 2- ಎ ಮೀಸಲಾತಿ ಹೋರಾಟದ ವಿಚಾರವಾಗಿ ಮಾತನಾಡಿದ ಪಾಟೀಲ್, ಸ್ವಾಮೀಜಿಗಳ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಯಾವುದೇ ಸರ್ಕಾರಕ್ಕೆ ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಬಗೆಹರಿಸಲು ಕಾಲಾವಕಾಶ ಬೇಕಾಗುತ್ತೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪೂರಕವಾಗಿ ಸ್ಪಂದನೆ ಮಾಡಿದ್ದು, ನನಗೆ ಹಾಗೂ ಸಚಿವ ಮುರುಗೇಶ ನಿರಾಣಿಯವರಿಗೆ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸುವಂತೆ ಹೇಳಿದ್ರು. ಈಗಾಗಲೇ ಮಾತುಕತೆ ನಡೆಸಿದ್ದೇವೆ, ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪೂಜ್ಯ ಸ್ವಾಮೀಜಿಗಳು ಸರ್ಕಾರಕ್ಕೆ ಸಮಯಾವಕಾಶ ನೀಡಬೇಕು. ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿದ್ದು, ಸ್ವಾಮೀಜಿಗಳು ತಾಳ್ಮೆಯಿಂದ ಇರಬೇಕು. ಮೀಸಲಾತಿಗೆ ಅಷ್ಟೊಂದು ಅವಸರ ಮಾಡುವ ಅಗತ್ಯ ಇಲ್ಲ. ಸ್ವಾಮೀಜಿಗಳು ಹಾಗೂ ನಮ್ಮ ಸಮಾಜದ ಹಿರಿಯರು, ಹೋರಾಟಗಾರರು ಈ ಬಗ್ಗೆ ಅರ್ಥೈಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.