ಗದಗ: ಉಪ ಸಭಾಪತಿ ಪೀಠಕ್ಕಾಗಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಸಿ. ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದನದಲ್ಲಿ ಇಂದು ನಡೆದ ಘಟನೆ ನೋವಿನ ಸಂಗತಿ. ಕಿತ್ತಾಟ, ನೂಕಾಟ, ಗಲಾಟೆ ಇದು ಕಾಂಗ್ರೆಸ್ನವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದು ಸಿದ್ದರಾಮಯ್ಯ ನವರ ಕಾಲದಿಂದ ಬಂದ ಪರಂಪರೆ ಎಂದು ಟೀಕಿಸಿದರು.
ಈ ಹಿಂದೆ ಶಂಕರ್ ಬಿದರಿ ಅವರನ್ನು ಹೊರಹಾಕಿ ಆಗಲೂ ಹೈಡ್ರಾಮಾ ಮಾಡಿದ್ರು. ಅವರಿಗೆ ಧೈರ್ಯವಿದ್ದರೆ ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕಿತ್ತು. ಮತ ಹಾಕಬೇಕಿತ್ತು. ಬಹುಮತವಿಲ್ಲದೇ ಸ್ಪೀಕರ್ ಕೂರಲು ಸಾಧ್ಯನಾ? ಎಂದು ಪ್ರಶ್ನಿಸಿದರು.
ಅವಿಶ್ವಾಸ ನಿರ್ಣಯ ಮಾಡಿದ ವೇಳೆಯೂ, ಕಾಂಗ್ರೆಸ್‌ನವರು ಕುರ್ಚಿ ಮೇಲೆ ಕೂರಬಾರದು. ಬಹುಮತವಿದ್ರೆ 10 ನಿಮಿಷದಲ್ಲಿ ಮುಗಿಯುತ್ತದೆ. ರಾದ್ಧಾಂತ ಮಾಡುವುದು, ಕುರ್ಚಿ ಎಳೆಯುವುದು, ಅವರು ಕೂರಿಸುವುದು, ನಾವು ಕೂರಿಸುವುದು ಬೇಕಿತ್ತಾ?, ಬಹುಮತವಿದ್ರೆ 10 ನಿಮಿಷದಲ್ಲಿ ಕಲಾಪ ಮುಗಿದು ಗೋಹತ್ಯೆ ವಿಧೇಯಕ ಪಾಸ್ ಆಗುತ್ತಿತ್ತು ಎಂದರು.
ಕಾಂಗ್ರೆಸ್‌ನವರಿಗೆ, ಗೋ ಹತ್ಯೆ ವಿಧೇಯಕ ಪಾಸ್ ಮಾಡಬಾರದು ಎಂಬ ಉದ್ದೇಶ ಇರಬಹುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಇದು ಅವರು ಹಿಂದೂಗಳ ಭಾವನೆಗಳ ಜೊತೆ ಎಷ್ಟು ಆಟವಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.