ಗದಗ : ಮುಖ್ಯಮಂತ್ರಿ ಕುರ್ಚಿಗೆ ಹಾರುವ ಕನಸಿನ ಉದ್ದೇಶದಿಂದ ಸಿದ್ದರಾಮಯ್ಯನವರು ಆರೋಪ-ಪ್ರತ್ಯಾರೋಪ ಮಾಡುತ್ತಾರೆ ಎಂದು ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳುವ ಹಾಗೆ ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಅಲ್ಲ. ಕೊರೊನಾ ಇರುವುದರಿಂದ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈಗ ಪಾರದರ್ಶಕವಾಗಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದರು. ಸಿದ್ದರಾಮ್ಯಯ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಆದರೆ, ಜನರಿಗೆ ಒಳ್ಳೆಯದಾಗಬೇಕೆಂಬ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಹಾರ ಬೇಕೆಂದ್ರೆ ಆರೋಪ ಮಾಡಲೇಬೇಕಲ್ವಾ.. ಹಾಗಾಗಿ, ಸಿದ್ದರಾಮಯ್ಯನವರು ಯಾವುದೇ ಚುನಾವಣೆಯಲ್ಲಿ ಗೆದ್ದರೆ ಸಾಕು, ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತಾರೆ. ಕಾಂಗ್ರೆಸ್ನಲ್ಲೂ ಬಹಳಷ್ಟು ಒಡಕಿದೆ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಜಿ.ಪರಮೇಶ್ವರ್ ನಡುವೆ ಫೈಟ್ ಇದೆ ಎಂದರು.
ಸಚಿವ ಕೆ ಎಸ್ ಈಶ್ವರಪ್ಪನವರ ಎಸ್‌ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಬೆಂಬಲವಿದೆ ಎಂಬ ಸಿದ್ದರಾಮಯ್ಯನವರ ಆರೋಪವನ್ನೂ ಶ್ರೀರಾಮುಲು ತಳ್ಳಿ ಹಾಕಿದರು. ಆರ್ಎಸ್ಎಸ್ ಜಾತಿ, ಪಂಗಡ ವಿಷಯಕ್ಕೆ ಕೈ ಹಾಕಲ್ಲ. ಸಿದ್ದರಾಮಯ್ಯ ಆಡಳಿತ ಸರ್ಕಾರದಲ್ಲಿಲ್ಲ.
ಕುರುಬ ಸಮಾಜದಲ್ಲಿ ಸಿದ್ದರಾಮಯ್ಯ ಗುರುತಿಸಿಕೊಳ್ಳಲಾಗ್ತಿಲ್ಲ. ಆದ್ದರಿಂದ ಅಹಿಂದ ತೆಕ್ಕೆಗೆ ತೆಗೆದುಕೊಳ್ಳುವ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಅನ್ನೋ ರೀತಿ ನಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.