ಗದಗ : ನಾಗವಾರ ಬಳಿಯ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತದಿಂದ ಬೆಂಗಳೂರಿನಲ್ಲಿ ಮೃತಪಟ್ಟ ತೇಜಸ್ವಿನಿ ಮತ್ತು ಅವರ ಪುತ್ರ ವಿಹಾನ್ ಮೂಲತಃ ಗದಗ ನಿವಾಸಿಗಳು ಎಂದು ತಿಳಿದುಬಂದಿದೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಒಡನಾಟ ನೆನೆದು ಊರಿನ ಜನರು ಕಣ್ಣೀರಾದರು.
ಮೃತರ ಒಡನಾಟ ನೆನೆದು ಕಣ್ಣೀರಿಟ್ಟ ಜನರು : ಮೃತರ ನಡುವಿನ ಒಡನಾಟದ ಬಗ್ಗೆ ಮಾತನಾಡಿದ ಬಡಾವಣೆ ನಿವಾಸಿಗಳು, ಮೃತ ತೇಜಸ್ವಿನಿ ಅವರ ಪತಿ ಲೋಹಿತ್ ಮೂಲತಃ ಗದಗ ಜಿಲ್ಲೆಯ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಯಾಗಿದ್ದಾರೆ. ಕೆಲವು ದಿನಗಳ ಕಾಲ ತೇಜಸ್ವಿನಿ,ಮಗ ವಿಹಾನ್ ಸೇರಿದಂತೆ ಲೋಹಿತ್ ಅವರ ಕುಟುಂಬ ಇಲ್ಲಿಯೇ ನೆಲೆಸಿತ್ತು. ಲೋಹಿತ್ ಅವರ ತಂದೆ ವಿಜಯ್ ಕುಮಾರ್, ಇಲ್ಲಿಯ ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಆಗಿದ್ದರು.
ಲೋಹಿತ್ ಅವರು ವಿಜಯ್ ಕುಮಾರ್ ಅವರ ಹಿರಿಯ ಮಗ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರಿಂದ ಕೆಲಸ ಸಿಕ್ಕಿದೆ ಎಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಸುಮಾರು ಆರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ಘಟನೆ ಬಗ್ಗೆ ಕೇಳಿ ಆಘಾತವಾಯಿತು. ಇತ್ತೀಚೆಗಷ್ಟೇ ಊರಿಗೆ ಬಂದು ಹೋಗಿದ್ದರು. ನಮ್ಮ ಏರಿಯಾದಲ್ಲಿ ಯಾವತ್ತೂ ಕಿರಿಕಿರಿ ಮಾಡಿದವರಲ್ಲ. ದೇವರು ಹೀಗೆ ಮಾಡಬಾರದಿತ್ತು ಎಂದು ಕಣ್ಣೀರಿಟ್ಟರು.
ಲೋಹಿತ್ ಅವರ ತಂದೆ ತಾಯಿಯೂ ಮೂಲತಃ ಇದೇ ಬಡಾವಣೆಯವರು. ಲೋಹಿತ್ ಅವರ ತಂದೆ ವಿಜಯ್ ಕುಮಾರ್ ನಗರಭೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ನೀರಾವರಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿದ್ದರು. ನಿವೃತ್ತಿ ಬಳಿಕ ಮಗ ಮತ್ತು ಸೊಸೆ ಬೆಂಗಳೂರಿನಲ್ಲಿದ್ದಾರೆಂದು ಅಲ್ಲಿಗೆ ಹೋಗಿದ್ದರು. ಆದರೂ, ಇಲ್ಲಿಗೆ ಆಗಾಗ ಎಲ್ಲರೂ ಬಂದು ಹೋಗುತ್ತಿದ್ದರು.
ಕಳೆದ 8 ದಿನದ ಹಿಂದೆಯಷ್ಟೇ ಲೋಹಿತ್ ಕುಟುಂಬ ಊರಿನಿಂದ ಬೆಂಗಳೂರಿಗೆ ತೆರಳಿತ್ತು. ಇವರಿಗೆ ಅವಳಿ ಗಂಡು ಮತ್ತು ಹೆಣ್ಣು ಮಕ್ಕಳು. ವಿಜಯ್ ಕುಮಾರ್ ಅವರು ಈ ಅವಳಿ ಮೊಮ್ಮಕ್ಕಳನ್ನು ಬಹಳ ಹಚ್ಚಿಕೊಂಡಿದ್ದರು. ಯಾರೊಂದಿಗೂ ಕೋಪದಿಂದ ಮಾತನಾಡಿಸಿದವರಲ್ಲ. ಈ ದುರಂತ ಕೇಳಿ ಸಂಕಟವಾಗುತ್ತಿದೆ. ಇದನ್ನು ಸಹಿಸಿಕೊಳ್ಳುವಂತಹ ಶಕ್ತಿ ಆ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿ.ಸಿ ಪಾಟೀಲ್ : ಘಟನೆ ಬಗ್ಗೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋ ಕಾಮಗಾರಿ ವೇಳೆ ಇಂದು ಬೆಳಗ್ಗೆ ಪಿಲ್ಲರ್ ಕುಸಿದಿದೆ. ಗದಗ ಮೂಲದವಾರದ ಲೋಹಿತ್ ಅವರ ಪತ್ನಿ ತೇಜಸ್ವಿನಿ (28) ಮತ್ತು ಅವರ ಪುತ್ರ ವಿಹಾನ್ (2.5) ದುರಂತದಲ್ಲಿ ಮೃತಪಟ್ಟಿದ್ದು ವಿಷಾದನೀಯ ಸಂಗತಿ. ಘಟನೆಯಲ್ಲಿ ಲೋಹಿತ್ ಕೂಡ ಗಾಯಗೊಂಡಿದ್ದಾರೆ. ಈ ದುರ್ಘಟನೆ ನಡೆಯಬಾರದಿತ್ತು. ಗಾಯಗೊಂಡ ಲೋಹಿತ್ ಬೇಗನೇ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ. ಅಲ್ಲದೇ ಮಡದಿ ಮತ್ತು ಮಗನನ್ನು ಕಳೆದುಕೊಂಡ ಅವರಿಗೆ ಈ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿ ನೀಡಲಿ ಎಂದು ಹೇಳಿದರು.
ಇಂದು ಬೆಳಗ್ಗೆ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಅವಳಿ ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ, ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡಿದ್ದು ತೇಜಸ್ವಿನಿ ಮತ್ತು ಅವರ ಪುತ್ರ ವಿಹಾನ್ ಮೇಲೆ ಬಿದ್ದಿತ್ತು. ಪರಿಣಾಮ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದರು. ಘಟನೆಯಲ್ಲಿ ಲೋಹಿತ್ ಮತ್ತು ಹೆಣ್ಣು ಮಗುವಿಗೆ ಗಂಭೀರಗಾಯವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ಪರಿಹಾರ : ಬೆಂಗಳೂರಲ್ಲಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ಎಲ್ಲ ಮಾಹಿತಿ ಪಡೆಯುತ್ತಿದ್ದೇನೆ. ಗದಗದ ಹೆಣ್ಣು ಮಗಳ ತಲೆ ಮೇಲೆ ಪಿಲ್ಲರ್ ಬಿದ್ದು ಸಾವಾಗಿದೆ. ಇದು ಅತ್ಯಂತ ದುರದೃಷ್ಟಕರ. ಈ ಬಗ್ಗೆ ಎಲ್ಲ ರೀತಿಯ ತನಿಖೆ ಮಾಡಿಸುತ್ತೇವೆ. ಸಂಬಂಧಿಸಿದವರ ಮೇಲೆ ಕೇಸ್ ಹಾಕಲು ಹೇಳಿದ್ದೇನೆ. ಮೃತಪಟ್ಟವರಿಗೆ ಮೆಟ್ರೋ ಸಂಸ್ಥೆಯಿಂದ ಪರಿಹಾರ ನೀಡಲಾಗುವುದು ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿನಿಂದಲೂ ತಲಾ 10 ಲಕ್ಷ ರೂ. ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ : ಮೆಟ್ರೋ ಪಿಲ್ಲರ್ ಕುಸಿತ.. ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ಘೋಷಣೆ