ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಗುಳ್ಳವ್ವನ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷ ಅಂದ್ರೆ ಗುಳ್ಳವ್ವ ಮತ್ತು ಗೊಗ್ಗಪ್ಪನಿಗೆ ಮಾಸ್ಕ್ ಹಾಕಿ ಈ ಬಾರಿ ಹಬ್ಬ ಆಚರಿಸಲಾಗಿದೆ.
ಜಕ್ಕಲಿ ಗ್ರಾಮದ ಮೆಣಸಿಗಿಯವರ ಓಣಿಯ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿ ಆಷಾಢ ಮಾಸದ ಪ್ರತಿ ಮಂಗಳವಾರ ಗುಳ್ಳವ್ವನ ಮೂರ್ತಿ ಇಟ್ಟು ಪೂಜೆ ಮಾಡಿ ಮಳೆರಾಯನಿಗೆ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಕೆರೆಯಿಂದ ತಂದಿದ್ದ ಎರೆ ಮಣ್ಣಿನಿಂದ ಗುಳ್ಳವ್ವ ಹಾಗೂ ಗೊಗ್ಗಪ್ಪನ ಗೊಂಬೆಗಳನ್ನು ತಯಾರಿಸಿ ಹಬ್ಬವನ್ನು ಆಚರಿಸುವ ಇವರು, ಮಣ್ಣಿತ್ತಿನ ಅಮಾವಾಸ್ಯೆಯಿಂದ ನಾಗರ ಪಂಚಮಿ ಅಮಾವಾಸ್ಯೆವರೆಗೆ ಬರುವ ಪ್ರತಿ ಮಂಗಳವಾರ ಪಲ್ಲೇದವರ ಮನೆ ಬಂಕದ ಕಟ್ಟಿಯಲ್ಲಿ ಪ್ರತಿಷ್ಠಾಪಿಸುವುದು ನಡೆದುಕೊಂಡು ಬಂದಿದೆ.
ಗುಳ್ಳವ್ವನಿಗೆ ಗುಲಗಂಜಿ, ಜೋಳ, ಬಿಳಿ ಕುಸುಬಿಯನ್ನು ಚುಚ್ಚಿ ಅರಿಶಿಣ-ಕುಂಕುಮ ಹಚ್ಚಿ ಹೂಮಾಲೆ ಕೊರಳಿಗೆ ಹಾಕಿ ಸೀರೆ, ರವಿಕೆ, ನಡುಪಟ್ಟು, ಕಿವಿಯೋಲೆ, ಕೊರಳು ದಾಗಿಣ ಹಾಕಿ ವಿಶಿಷ್ಟವಾಗಿ ಶೃಂಗಾರ ಮಾಡುತ್ತಾರೆ. ಗುಳ್ಳವ್ವನ ಮಗ್ಗುಲಿಗೆ ಗೊಗ್ಗಪ್ಪನ ಮೂರ್ತಿ ಕುಳ್ಳಿರಿಸಿ ಅವನ ಬಾಯಿಯಲ್ಲಿ ಬೀಡಿ ಅಥವಾ ಸಿಗರೇಟು ಇಟ್ಟು ವ್ಯಂಗ್ಯ ಮಾಡುವುದು ಸಂಪ್ರದಾಯ.
ಈ ಕೊರೊನಾ ಸಂದರ್ಭದಲ್ಲಿ ಈ ಹಬ್ಬ ಕಳೆಗುಂದಬಾರದು ಅಂತಾ ವಿಶೇಷವಾಗಿ ಗುಳ್ಳವ್ವ-ಗೊಗ್ಗಪ್ಪನಿಗೆ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬವನ್ನು ಆಚರಿಸಲಾಯಿತು. ವಿಭಿನ್ನ ನಂಬಿಕೆ ಇಟ್ಟಕೊಂಡು ಬಂದಿರುವ ಉತ್ತರ ಕರ್ನಾಟಕದ ಕೃಷಿಕರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ನಂತರ ಈ ಗುಳ್ಳವ್ವ-ಗೊಗ್ಗಪ್ಪನ ಗೊಂಬೆ ಹಬ್ಬವನ್ನು ಆಚರಿಸಿದ್ದಾರೆ.
ವಿಶೇಷ ಪ್ರಾರ್ಥನೆ: ಗ್ರಾಮೀಣ ವೈವಿಧ್ಯಮಯ ಆಚರಣೆ, ನಂಬಿಕೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಗುಳ್ಳವ್ವನ ಪೂಜೆ ಮಹತ್ವ ಪಡೆದಿದೆ. ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳ ಫಸಲು ಉತ್ತಮವಾಗಿ ರೈತರಿಗೆ ಸಿಗುವಂತಾಗಲಿ. ಮಹಾಮಾರಿ ಕೊರೊನಾ ನಮ್ಮ ದೇಶದಿಂದ ಬೇಗನೆ ತೊಲಗಲಿ. ರೈತನ ಬಾಳು ಹಸನಾಗಲಿ ಎಂದು ಸಂಜೆ ವೇಳೆ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಎಡೆ ಹಿಡಿದು ಪೂಜೆ ಸಲ್ಲಿಸಿದರು.
ಇದಾದ ಬಳಿಕ ರಾತ್ರಿ ಗೊಂಬೆ ಮೂರ್ತಿಗಳ ಹತ್ತಿರ ಸೇರಿದ ಮಕ್ಕಳೆಲ್ಲರೂ ಜಾತಿ ಮತ ಭೇದವಿಲ್ಲದೆ ಒಟ್ಟಾಗಿ ಕುಳಿತು ತಮ್ಮ ತಮ್ಮ ಮನೆಗಳಿಂದ ತಂದಿದ್ದ ಚೊಂಚಲಾ, ದೋಸೆ ಹಾಗೂ ನಾನಾ ಸಿಹಿ ಅಡುಗೆಗಳ ಭೋಜನ ಸವಿದರು. ಹಿರಿಯ ರೈತ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಬಸವಣ್ಣನವರ ವಚನಗಳನ್ನು ಮತ್ತು ಗುಳ್ಳವ್ವ-ಗೊಗ್ಗಪ್ಪನ ಪದಗಳನ್ನು ಹಾಡಿದರು.