ಗದಗ: ಸಾಮಾನ್ಯವಾಗಿ ಉದ್ಯೋಗ ಅರಸಿ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದುಂಟು. ಆದರೆ ಇಲ್ಲೊಬ್ಬರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ತ್ಯಜಿಸಿ ಸ್ವಂತ ಉದ್ದಿಮೆಯೊಂದನ್ನು ಆರಂಭಿಸಿ ಈಗ ವಾರ್ಷಿಕ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಗ್ರಾಮದ ಬಸವರಾಜ ಒಂಕಲಕುಂಟೆ ತಾನು ಓದಿದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಧಾರದ ಮೇಲೆ ಬೆಂಗಳೂರಿನ ಟಪೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಇವರಿಗೆ ಬರುತ್ತಿದ್ದದ್ದು ಕೇವಲ 12 ಸಾವಿರ ರೂಪಾಯಿ ಸಂಬಳ. ಇದರಿಂದ ತೃಪ್ತರಾಗದ ಬಸವರಾಜ ತನ್ನೂರಿಗೆ 2007ರಲ್ಲಿ ವಾಪಸ್ ಆಗಿ ಮೂರು ಬ್ಯಾಂಕ್ನಲ್ಲಿ ಸಾಲ ಪಡೆದು ಒಟ್ಟು ನಾಲ್ಕು ಲಕ್ಷ ರೂಪಾಯಿಯಲ್ಲಿ ಬಸವೇಶ್ವರ ಎಂಜಿನಿಯರಿಂಗ್ ವರ್ಕ್ಸ್ ಎಂಬ ಉದ್ದಿಮೆ ಸ್ಥಾಪಿಸಿದರು.
ಉದ್ದಿಮೆ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳಿಗೆ ಸಿಲುಕಿದ ಇವರು ಛಲ ಬಿಡದೇ ಅನೇಕಾನೇಕ ಎಂಜಿನಿಯರಿಂಗ್ ವಸ್ತುಗಳನ್ನು ಉತ್ಪಾದಿಸಿ ಕೈ ಸುಟ್ಟುಕೊಂಡಿದ್ದರು. ಆದರೂ ಕೂಡಾ ಸಣ್ಣಪುಟ್ಟ ಮಷಿನ್ಗಳಲ್ಲೇ ಟ್ರ್ಯಾಕ್ಟರ್, ಟ್ರೇಲರ್, ಸ್ಕೂಲ್ ಡೆಸ್ಕ್ಗಳನ್ನು ತಯಾರಿಸಿ, ಗ್ರಾಮಗಳಿಗೆ ಸೈಕಲ್ ಮೂಲಕ ತೆರಳಿ ಜನರಿಗೆ ಪರಿಚಯಿಸುತ್ತಿದ್ದರು. ಈಗ ಆ ಉದ್ದಿಮೆ ಬೃಹದಾಕಾರವಾಗಿ ಬೆಳೆದು ಸುಮಾರು 20 ಮಂದಿಗೆ ಕೆಲಸ ನೀಡುತ್ತಿದೆ. ಇಲ್ಲಿ ತಯಾರಾಗುವ ವಸ್ತುಗಳು ರಾಜ್ಯದ ನಾನಾ ಭಾಗಗಳಿಗೆ ರಫ್ತಾಗುತ್ತವೆ. ಈಗ ಜನರ ಪಾಲಿಗೆ ಬಸವರಾಜ್ ಅಚ್ಚರಿಯಾಗಿ ಕಾಣುತ್ತಿದ್ದಾರೆ.