ಗದಗ: ಮಲಪ್ರಭಾ ನದಿಯ ಪ್ರವಾಹ ರೈತರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಸಂಪೂರ್ಣ ಕೊಳೆತುಹೋಗಿವೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ರೈತ ಭೀಮ್ಸಿ ಪೂಜಾರ್ ಎಂಬಾತ ತನ್ನ ಮೂರೂವರೆ ಎಕರೆ ಪ್ರದೇಶದಲ್ಲಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿ ಕೊಳೆತು ಹೋಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ ಎರಡೂವರೆ ಎಕರೆಗೆ 18000 ಸಾವಿರ ರೂಪಾಯಿ ಮಾತ್ರ ನೀಡೋಕೆ ಸಾಧ್ಯ ಇದೆ ಅಂತ ಹೇಳ್ತಿದ್ದಾರಂತೆ.
ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಇಷ್ಟು ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ. ಒಂದು ಮನೆ ಬಿದ್ರೆ 5 ಲಕ್ಷ ಕೊಡೋ ಸರ್ಕಾರ ರೈತನ ಬೆಳೆ ಹಾಳಾಗಿ ಹೋದ್ರೆ ಯಾಕೆ ಈ ತಾರತಮ್ಯ ಅಂತ ರೈತ ಅಳಲು ತೋಡಿಕೊಂಡಿದ್ದಾನೆ. ಹೀಗಾಗಿ ಸರ್ಕಾರ ಇದಕ್ಕೆ ಸ್ಪಂದಿಸಿ ಸಮರ್ಪಕ ಪರಿಹಾರ ನೀಡಿದಾಗ ಮಾತ್ರ ಮುಂದೆ ಇಂತಹ ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದೇ ಹೋದಲ್ಲಿ ರೈತನ ಬಾಳು ಯಾವುದಕ್ಕೂ ಬಾರದು ಅಂತಾ ರೈತ ಭೀಮ್ಸಿ ಸ್ವತಃ ತಾನೇ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.