ಗದಗ : ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿನ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇತ್ತ ಮಲಪ್ರಭಾ ಅಣೆಕಟ್ಟು ಸಹ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಯಾವುದೇ ಕ್ಷಣದಲ್ಲಿ ಅಣೆಕಟ್ಟಿನಿಂದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಲಪ್ರಭಾ ನದಿ ತೀರದಲ್ಲಿ ಇರುವ ಹಳ್ಳಿಗಳ ಜನರಿಗೆ ಆತಂಕ ಹೆಚ್ಚಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ನೀರಾವರಿ ನಿಗಮದ ಅಧಿಕಾರಿಗಳು ನದಿ ದಡದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಮಲಪ್ರಭಾ ಅಣೆಕಟ್ಟೆ (ನವಿಲುತೀರ್ಥ)ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಲಪ್ರಭಾ ಆಣೆಕಟ್ಟಿನ ಸಾಮರ್ಥ್ಯ 2079.50 ಅಡಿ. ಸಧ್ಯ 2066.70 ಅಡಿ ನೀರು ಭರ್ತಿಯಾಗಿದೆ. 48821 ಕ್ಯೂಸೆಕ್ ನೀರು ಒಳ ಹರಿವಿದೆ. ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಒಳ ಹರಿವನ್ನು ಆಧರಿಸಿ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಹಾಗಾಗಿ ನದಿ ಪಾತ್ರದಲ್ಲಿ ಇರುವವರು ತಕ್ಷಣ ತಮ್ಮ ಆಸ್ತಿ-ಪಾಸ್ತಿಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ ಕೊಣ್ಣೂರ, ವಾಸನ, ಲಖಮಾಪೂರ, ಮೆಣಸಗಿ, ಹೊಳೆ ಆಲೂರ ಸೇರಿ 16 ಗ್ರಾಮಗಳ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಬಾರಿ ಮಲಪ್ರಭಾ ನದಿಯಿಂದ 16 ಗ್ರಾಮಗಳು ಜಲ ಪ್ರಳವಾಗಿದ್ದವು, ಈಗ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಹಾಗಾಗಿ ನದಿ ತೀರದ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಬೆಳಗಾವಿ, ಬಾಗಲಕೋಟ, ಗದಗ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿಯನ್ನು ಕಳುಹಿಸಿದ್ದಾರೆ.