ಗದಗ: ಕಳಸಾ ಬಂಡೂರಿ ನಾಲಾ ಯೋಜನೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಗದಗ ಜಿಲ್ಲೆಯ ಮಹದಾಯಿ ಹೋರಾಟಗಾರರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೆ ಸಜ್ಜಾಗಿದ್ದಾರೆ.
ಮಹದಾಯಿ ಹೋರಾಟಕ್ಕೆ ಆರು ವರ್ಷಗಳ ಗತಿಸಿದರೂ ಸಹ ಸರ್ಕಾರ ಇನ್ನೂ ನಮ್ಮ ಬೇಡಿಕೆಯನ್ನು ಪೂರ್ಣಗೊಳಿಸಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಮಹದಾಯಿ ಹೋರಾಟಗಾರರು, ನಿನ್ನೆ ನರಗುಂದದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಸಾಕಾಗುವಷ್ಟು ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಕಾಮಗಾರಿ ಬೇಗ ಆರಂಭ ಮಾಡಿ ಪೂರ್ಣಗೊಳಿಸಬೇಕು ಅಂತ ಒತ್ತಾಯಿಸಿದರು.
ಮಹದಾಯಿ ಹೋರಾಟ 7ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಮಹತ್ವದ ಸಭೆ ನಡೆಸಿದ ಮಹದಾಯಿ ಹೋರಾಟಗಾರರು ಐದು ಪ್ರಮುಖ ವಿಷಯಗಳ ಕುರಿತು ಸುಪ್ರೀಂಕೋರ್ಟ್ ಮೊರೆ ಹೋಗುವುದರ ಜೊತೆಗೆ ರೈತರ ಬೆಳೆಗೆ ಬೆಂಬಲ ಬೆಲೆ ಆಗ್ರಹಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಕಳೆದ ವಾರವೇ ಹೈಕೋರ್ಟ್ನಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಮೂರನೇಯದಾಗಿ ಮಹದಾಯಿ ಹೋರಾಟದಲ್ಲಿ ಮೃತಪಟ್ಟ 11 ಜನ ರೈತರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಒತ್ತಾಯ ಮಾಡಿದ್ದಾರೆ. ಜೊತೆಗೆ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳ ಕಳಪೆ ಕಾಮಗಾರಿ ಕುರಿತು ಹೋರಾಟ ಮತ್ತು ಸುಮಾರು 1200 ಕೋಟಿ. ರೂ ವೆಚ್ಚದ ಬಲದಂಡೆ ಕಾಲುವೆ ಕಾಮಗಾರಿ ಮಾಹಿತಿ ನೀಡಬೇಕು. ಐದನೇಯದಾಗಿ ಕಳಸಾ ಹೋರಾಟಗಾರರಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮಹದಾಯಿ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ 13.7 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಅಂತ ಸುಪ್ರೀಂ ಸೂಚಿಸಿತ್ತು. ಆದರೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಯಾವಾಗ ಯೋಜನೆ ಪೂರ್ಣಗೊಳ್ಳುತ್ತದೆ. ನಮಗೆ ನೀರು ಯಾವಾಗ ಸಿಗುತ್ತದೆ ಅಂತ ರೈತರು ಎದುರು ನೋಡುತ್ತಿದ್ದಾರೆ.