ಗದಗ: ಗ್ರಾಮ ಲೆಕ್ಕಾಧಿಕಾರಿಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಕದ್ದು ನೂರಾರು ರೈತರ ಬೆಳೆ ವಿಮೆ ಪರಿಹಾರದ ಹಣವನ್ನು ಲಪಟಾಯಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಡರಗಿ ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕಿತ್ತಿದ್ದ ಮಂಜುನಾಥ್ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಸಂಶಿ ಬಂಧಿತ ಆರೋಪಿಗಳು. ಮಂಜುನಾಥ್ ವೆಂಕಟಾಪುರ ಗ್ರಾಮ ಪಂಚಾಯತ್‌ನ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರ ಲಾಗಿನ್ ಹಾಗೂ ಪಾಸ್‌ವರ್ಡ್ ಕದ್ದು, ರೈತರ ಬೆಳೆ ವಿಮೆ ಪರಿಹಾರವನ್ನು ತಮಗೆ ಕಮಿಷನ್ ನೀಡುವವರಿಗೆ ಹಾಗೂ ರೈತರಲ್ಲದ ಅದೆಷ್ಟೋ ಜನಕ್ಕೆ ಹಾಕಿ ಹಣ ಲಪಟಾಯಿಸಿದ್ದಾನೆ. ಇದಕ್ಕೆ ಸ್ನೇಹಿತ ಮಲ್ಲಿಕಾರ್ಜುನ ಸಂಶಿ ಸಹ ಸಹಕರಿಸಿದ್ದ. ಇವರಿಬ್ಬರೂ ಸೇರಿ ಒಟ್ಟಾಗಿ 60 ಜನ ರೈತರ 5,95,330 ರೂ. ಹಣ ಲೂಟಿ ಮಾಡಿದ್ದಾರೆ.
ರೈತರು ತಮಗೆ ಬಂದ ಕಡಿಮೆ ಪರಿಹಾರದ ಬಗ್ಗೆ ವಿಚಾರಣೆ ನಡೆಸಿದಾಗ ಈ ಮೋಸ ಬಯಲಿಗೆ ಬಂದಿದೆ. ರೈತರು ಇವರಿಬ್ಬರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಈಗ ಮುಂಡರಗಿ ತಹಶೀಲ್ದಾರ್ ಆದೇಶದ ಮೇರೆಗೆ ಈ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.