ಗದಗ: ಅಪಾರ ಆಯುರ್ವೇದ ಗಿಡಮೂಲಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿದ್ದು, ಇದಕ್ಕೆ ಅವಕಾಶ ಮಾಡಿಕೊಡದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿಗಳು ಸುದೀರ್ಘ ಪತ್ರ ಬರೆದಿದ್ದಾರೆ. ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಭೂಗಳ್ಳರಿಂದ ಕಪ್ಪತ್ತಗುಡ್ಡವನ್ನು ಉಳಿಸುವಂತೆ ಶ್ರೀಗಳು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿವೆ. ಅರಣ್ಯ ಇಲಾಖೆ ಇವರ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೇ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಬೆನ್ನು ಬಿದ್ದಿದ್ದಾರೆ. ಸದ್ಯ ವನ್ಯಜೀವಿ ಧಾಮದ ಕಾನೂನು ಪ್ರಕಾರ 10 ಕಿ.ಮೀ.ವ್ಯಾಪ್ತಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಆದರೆ ಇದನ್ನು ಒಂದು ಕಿ.ಮೀ.ವ್ಯಾಪ್ತಿಗೆ ಇಳಿಸುವಂತೆ ಭೂಗಳ್ಳರು ಒಳಸಂಚು ರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗಣಿಗಾರಿಕೆ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು: ಖಾಸಗಿ ಕಂಪನಿಯೊಂದು ಸದ್ಯ ಹೈಕೋರ್ಟಿನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದೆ. ಶತಾಯಗತಾಯ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಈ ಮೂಲಕ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಸಂಪತ್ತು ನಮ್ಮ ಹೊಣೆ. ಅದನ್ನು ಉಳಿಸಿ, ಬೆಳೆಸಿ, ಬಳಸಬೇಕು. ಪದೇ ಪದೇ ಕಪ್ಪತ್ತಗುಡ್ಡಕ್ಕೆ ಕಂಟಕ ತರುತ್ತಿರುವ ಗಣಿಗಾರಿಕೆ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಹಿಂದೆ ಹಲವು ಮಠಾಧೀಶರು ಮತ್ತು ಪರಿಸರ ಹೋರಾಟಗಾರರಿಂದ ಕಪ್ಪತ್ತಗುಡ್ಡ ರಕ್ಷಣೆ ಮಾಡುವ ಕೆಲಸವಾಗಿದೆ. ಇವರೆಲ್ಲರ ಹೋರಾಟದ ಫಲವಾಗಿ ಸರ್ಕಾರ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಣೆ ಮಾಡಿದೆ. ಹಾಗಾಗಿ ಗಣಿಗಾರಿಕೆ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ಮಾಡಿಕೊಡದಂತೆ ತಾವು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಧಾನಿ ಅವರಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಗದ್ದುಗೆ ವಿವಾದದ ನಡುವೆಯೂ ನೆರವೇರಿದ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ
ಔಷಧೀಯ ಸಸ್ಯ ಸಂಪತ್ತಿನ ಕಪ್ಪತ್ತಗುಡ್ಡ ಕುರಿತು ಪುಸ್ತಕ ಬರೆದಿದ್ದ ದಂಪತಿ: ಸಸ್ಯ ಸಂಪತ್ತಿನ ಅರಿವಷ್ಟೇ ಅಲ್ಲದೆ ಅದರ ದಾಖಲೀಕರಣವೂ ಆಗಬೇಕು ಎನ್ನುವ ಉದ್ದೇಶದಿಂದ ಅರಣ್ಯ ಇಲಾಖೆ ದಂಪತಿ ಅಧಿಕಾರಿಗಳಿಬ್ಬರು ಪಣ ತೊಟ್ಟು ಕಪ್ಪತ್ತಗುಡ್ಡದ ಸಸ್ಯಗಳನ್ನು ಈ ಹಿಂದೆ ದಾಖಲೀಕರಣಗೊಳಿಸಿದ್ದರು. ಧಾರವಾಡದ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅವರ ಪತ್ನಿ ಹಾಗೂ ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ ಅವರು ಈ ಮಹತ್ವದ ಕಾರ್ಯ ಮಾಡಿದ್ದರು.
ಅರಣ್ಯದಲ್ಲಿನ ಬಗೆ ಬಗೆಯ ಸಂಪತ್ತು ಉಳಿಯಬೇಕು ಹಾಗೂ ಸಸ್ಯಗಳ ಮಾಹಿತಿ ನೀಡುವ ಧ್ಯೇಯದೊಂದಿಗೆ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿನ ಔಷಧಿ ಸಸ್ಯಗಳನ್ನು ದಾಖಲೀಕರಣಗೊಳಿಸಿದ್ದ ಇವರು. ಕಪ್ಪತ್ತಗುಡ್ಡದ 375 ಔಷಧಿ ಸಸ್ಯಗಳ ಸಮಗ್ರ ಮಾಹಿತಿ ಸಂಗ್ರಹಿಸಿಕೊಂಡು 'ಕಪ್ಪತ್ತಗುಡ್ಡ' (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕ ಬರೆದು ಸಿದ್ಧಪಡಿಸಿದ್ದರು. ಈ ಪುಸ್ತಕ ಔಷಧೀಯ ಸಸ್ಯಗಳ ಸಂತತಿ ಸೇರಿದಂತೆ ಅವುಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.