ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಲಿ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪರವರಿಗಾಗಲಿ ಯಾರಿಗೂ ಟಿಕೆಟ್ ಖಚಿತವಾಗಿಲ್ಲ. ಇದು ಕ್ಷೇತ್ರ ಆಯ್ಕೆ ನಂತರದ ವಿಷಯ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಶುಕ್ರವಾರ ಪಕ್ಷದ ಆಂತರಿಕ ಚುನಾವಣೆಯ ಬಳಿಕ ಗದಗದಲ್ಲಿ ಮಾಧ್ಯಮದವರೊಂದಿವಗೆ ಮಾತನಾಡಿದ ಅವರು, 224 ಕ್ಷೇತ್ರಗಳಿಗೂ ಸಂಘಟನಾತ್ಮಕ ವೀಕ್ಷಕರಾಗಿ ನಾಯಕರು ಬಂದಿದ್ದಾರೆ. ಗದಗದಲ್ಲಿಯೂ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಪಕ್ಷದ ಪದಾಧಿಕಾರಿಗಳು 3 ಅಭ್ಯರ್ಥಿಗಳ ಆಯ್ಕೆ ಮಾಡುವ ಅವಕಾಶ ಇದೆ. ಯಾರ ಪರ ಹೆಚ್ಚಿಗೆ ಅಭಿಪ್ರಾಯ ಸಂಗ್ರಹವಾಗಿದೆಯೋ ಅವರಿಗೆ ಆದ್ಯತೆ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಲಕ್ಷ್ಮಣ ಸವದಿ ಅವರು, ಶನಿವಾರ ರಾಜ್ಯ ಕೋರ್ ಕಮಿಟಿ ಎದುರು ಸಂಗ್ರಹ ಮಾಡಿರುವ ಅಭಿಪ್ರಾಯವನ್ನು ಓಪನ್ ಮಾಡುತ್ತೇವೆ. ಸಂಗ್ರಹವಾಗಿರುವ ಕಾರ್ಯಕರ್ತರ ಅಭಿಪ್ರಾಯವನ್ನೇ ಆಧಾರವಾಗಿಟ್ಟುಕೊಂಡು ಈ ಆಯ್ಕೆ ನಡೆಯಲಿದೆ. ಆಂತರಿಕ ಸರ್ವೆ ಕೂಡ ಬಂದಿದೆ. ಇವೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಯುತ್ತೆ. ಎಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಇರುವುದಿಲ್ಲವೋ ಅಲ್ಲಿ ಒಂದು ಹೆಸರನ್ನೇ ಶಿಫಾರಸ್ಸು ಮಾಡುತ್ತೇವೆ. ಎಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಇದ್ದರೇ ಚರ್ಚೆ ಮಾಡಿ ಒಂದು, ಎರಡು ಮತ್ತು ಮೂವರು ಅಭ್ಯರ್ಥಿಗಳ ಹೆಸರು ಕಳುಹಿಸುತ್ತೇವೆ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ಕೋಲಾರ ಸಮಾವೇಶ ಏ. 9ಕ್ಕೆ ಮುಂದೂಡಿಕೆ: ಕೈ ನಾಯಕರಿಂದ ಪೂರ್ವಭಾವಿ ಸಭೆ
ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ: ನಾನು ಬಂದಿರೋದು ಗೋಕಾಕ್, ಅಥಣಿ ವಿಷಯ ಮಾತನಾಡಲು ಅಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾಗಿದೆ. ಈಗ ವಾಪಸ್ ಚರ್ಚೆ ಮಾಡುವುದು ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧ. ಮುಂದುವರೆದು, 75 ವರ್ಷ ಮೀರಿದ ಅಭ್ಯರ್ಥಿಗಳ ಬಗ್ಗೆಯೂ ಯಾವುದೇ ವಿಷಯವನ್ನು ಹೈಕಮಾಂಡ್ ಹೇಳಿಲ್ಲ. ಕರ್ನಾಟಕದಲ್ಲಿ ಯಾವ ಮಾದರಿ ಇರುತ್ತದೆ ಎನ್ನುವುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.
ನಮ್ಮ ಪಕ್ಷದಲ್ಲಿ ಯಾವುದೇ ನಾಯಕರಿಗೆ ಕ್ಷೇತ್ರ ತೀರ್ಮಾನವಾಗಿಲ್ಲ: ಬೇರೆ ಕ್ಷೇತ್ರಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ್ ಸವದಿ ಅವರು, ಬೇರೆ ಬೇರೆ ಕ್ಷೇತ್ರಕ್ಕೆ ಕೇಳುತ್ತಿದ್ದಾರೆ. ಆದರೆ, ಅದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ನಮ್ಮ ಪಕ್ಷದ ಯಾವುದೇ ನಾಯಕರಿಗೆ, ಯಾವ ಕ್ಷೇತ್ರ ಅನ್ನುವುದು ನಿರ್ಣಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸೇರಿದಂತೆ ಯಾವ ಹಿರಿಯ ನಾಯಕರ ಬಗ್ಗೆಯೂ ನಿರ್ಣಯವಾಗಿಲ್ಲ. 224 ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈಗ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ನಿಕ್ಕಿ: ಏಪ್ರಿಲ್ 10 ರ ಬಳಿಕ ಪ್ರಕಟ ಸಾಧ್ಯತೆ