ಗದಗ: ರಾಜ್ಯದಲ್ಲಿ ಇತ್ತೀಚೆಗಷ್ಟೇ ಪಿಎಸ್ಐ ಪರೀಕ್ಷೆಯ ಅಕ್ರಮ ಹಗರಣ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಇದೀಗ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿದೆ. ಇದೇ ತಿಂಗಳ 7ರಂದು ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ವಂಚನೆ ನಡೆದಿರುವ ಸಂಶಯ ಬಹುತೇಕ ಸ್ಪಷ್ಟವಾಗುತ್ತಿದೆ.
ಕೆಪಿಟಿಸಿಎಲ್ನ ಕಿರಿಯ ಸಹಾಯಕ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಾಂಗವಾಗಿ ಎಕ್ಸಾಂ ನಡೆದಿತ್ತು. ಆದರೆ, ಈ ಪರೀಕ್ಷೆಯಲ್ಲಿಯೂ ಪ್ರಶ್ನೆ ಪತ್ರಿಕೆ ಬಹಿರಂಗವಾದ ವಿಷಯದ ಜಾಡು ಹಿಡಿದು ಹೊರಟ ಸೈಬರ್ ಕ್ರೈಂ ಪೊಲೀಸರು ನೇರ ಬಂದು ತಲುಪಿದ್ದು ಗದಗಕ್ಕೆ.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ತನಿಖೆ ಪ್ರಾಮಾಣಿಕ ಮತ್ತು ಪಾರದರ್ಶಕ- ಸಚಿವ ಆರಗ ಸಮರ್ಥನೆ
ಹೌದು, ಗದಗನಲ್ಲಿಯೇ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆಯೆಂಬ ವಿಷಯದ ಬೆನ್ನು ಬಿದ್ದ ಬೆಳಗಾವಿಯ ಸೈಬರ್ ಕ್ರೈಂ ಪೊಲೀಸರಿಗೆ ಆಘಾತಕಾರಿ ವಿಷಯ ಕಾದಿತ್ತು. ಇಲ್ಲಿನ ಮುನ್ಸಿಪಲ್ ಕಾಲೇಜ್ನಲ್ಲಿ ನಡೆದ ಪರೀಕ್ಷೆಯಲ್ಲಿ ತಂದೆ-ಮಗ ಪಶ್ನೆ ಪತ್ರಿಕೆ ಸೋರಿಕೆಗೆ ಕೈಜೋಡಿಸಿರುವ ವಿಷಯ ಬಹಿರಂಗವಾಗಿದೆ. ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಹಾಗೂ ಅವರ ಮಗ ಸಮೀತ್ ಕುಮಾರ್ ಬಂಧಿಸಿರುವ ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.
ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹೇಗೆ?: ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮಗ ಸಮೀತ್ ಕುಮಾರ್ ತನ್ನ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸೆರೆ ಹಿಡಿದಿದ್ದಾನೆ. ಅಲ್ಲದೇ, ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆ ಕಳಿಸಿರುವ ಶಂಕೆ ವ್ಯಕ್ತವಾಗಿದೆ. ಸಮೀತ್ ಕುಮಾರನ ಮೊಬೈಲ್ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಜೊತೆಗೆ ವಿಚಾರಣೆ ವೇಳೆ ಪ್ರಾಚಾರ್ಯರು ಕಣ್ಣೀರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ? ಚಾರ್ಜ್ ಶೀಟ್ನಲ್ಲಿ ಪಿನ್ ಟು ಪಿನ್ ಮಾಹಿತಿ
2022ರ ಆಗಸ್ಟ್ 7 ರಂದು ಕೆಪಿಟಿಸಿಎಲ್ ಪರೀಕ್ಷೆ ನಡೆದಿದ್ದು, ಗದಗ-ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ವಿರೇಶ್ ದೊಡ್ಡಮನಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೃತ್ಯದ ಹಿಂದೆ ಇನ್ನೂ ಯಾರ್ಯಾರಿದ್ದಾರೆ ಎಂಬ ವಿಷಯ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.