ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದಲ್ಲಿ ಮಕ್ಕಳು ಬಸ್ ಸೌಲಭ್ಯವಿಲ್ಲದೆ ನಡೆದುಕೊಂಡೇ ಹಳ್ಳ ದಾಟಿ ಶಾಲೆಗೆ ಹೋಗುತ್ತಿದ್ದಾರೆ. ಹೀಗಾಗಿ ಬಸ್ ಸೌಕರ್ಯ ಒದಗಿಸಿ ಶಾಲೆಗೆ ಹೋಗಲು ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರವಿದೆ. ಪ್ರೌಢ ಹಾಗೂ ಕಾಲೇಜಿಗೆ ವಿದ್ಯಾರ್ಥಿಗಳು ಸಮೀಪದ ಬೆಳ್ಳಟ್ಟಿ ಗ್ರಾಮ ಹಾಗೂ ಶಿರಹಟ್ಟಿ ಪಟ್ಟಣಕ್ಕೆ ಹೋಗಬೇಕು. ಆದರೆ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲ.
ಕೊಕ್ಕರಗುಂದಿ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಸ್ಕೂಲ್, ಕಾಲೇಜಿಗೆ ಹೋಗುತ್ತಾರೆ. ಬಸ್ ಸೌಲಭ್ಯ ಇಲ್ಲದ ಕಾರಣ ಮಕ್ಕಳು 7 ರಿಂದ 8 ಕಿಮೀ ಬೆಳ್ಳಟ್ಟಿಗೆ ನಡೆದುಕೊಂಡೇ ಹೋಗಬೇಕು. ಅಲ್ಲಿಂದ ಶಿರಹಟ್ಟಿ ಕಾಲೇಜಿಗೆ ವಿದ್ಯಾರ್ಥಿಗಳು ಬಸ್ ಮೂಲಕವೇ ಹೋಗಬೇಕಿದೆಯ. ಒಂದು ವೇಳೆ ಮಕ್ಕಳು ಶಾಲೆಗೆ ಹೋದಾಗ ಮಳೆ ಬಂದರೆ ತುಂಬಿ ಹರಿಯವ ಹಳ್ಳಗಳು ಶಾಂತವಾಗುವವರೆಗೂ ಹಳ್ಳದ ದಡದಲ್ಲೆ ಕಾಯಬೇಕು.
ಈ ಗ್ರಾಮದ ಮಕ್ಕಳ ಗೋಳು ಒಂದೆರಡು ದಿನಗಳದ್ದಲ್ಲ. ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸುವ ಗೋಜಿಗೆ ಜಿಲ್ಲಾಡಳಿತವಾಗಲೀ, ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವವರಾಗಲೇ ಹೋಗಿಲ್ಲ.
ಬಸ್ ಸೌಕರ್ಯ ಕಲ್ಪಿಸುವಂತೆ ಶಾಸಕ ರಾಮಣ್ಣ ಲಮಾಣಿ, ಶಿರಹಟ್ಟಿ ತಹಶೀಲ್ದಾರ ಮಜ್ಜಗೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನರೇಗಾ ಯೋಜನೆಯ 959 ಕೋಟಿ ರೂ ಬಾಕಿ ಮೊತ್ತವನ್ನು ಕೇಂದ್ರ ಬಿಡುಗಡೆ ಮಾಡಿದೆ: ಈಶ್ವರಪ್ಪ