ಗದಗ : ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಎಂಬುದು ಇದೀಗ ನರಕ ದರ್ಶನ ಮಾಡಿಸುತ್ತಿದೆ. ನೆಟ್ವರ್ಕ್ ಸಮಸ್ಯೆಯಿಂದ ಗದಗ ತಾಲೂಕಿನ ಕಬಲಾಯತಕಟ್ಟಿ ಹಾಗೂ ಸುತ್ತಲಿನ ಹಲವು ಗ್ರಾಮಗಳ ವಿದ್ಯಾರ್ಥಿಗಳ ಪರದಾಟ ಹೇಳ ತೀರದಾಗಿದೆ.
ಕೊರೊನಾ ವೈರಸ್ ಬಂದ ಮೇಲೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಶಿಕ್ಷಣ ಇಲಾಖೆ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಶಿಕ್ಷಣ ನೀಡುತ್ತಿದೆ. ಆದರೆ, ಈ ಆನ್‌ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ಶಕ್ತಿಯಿಲ್ಲ. ಒಂದು ವೇಳೆ ತೆಗೆದುಕೊಂಡರೂ ವಿದ್ಯುತ್ ಸಮಸ್ಯೆ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದರಿಂದ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಕಬಲಾಯತಕಟ್ಟಿ ಗ್ರಾಮ ಗದಗ ನಗರದಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ. ಆದರೂ ಇಲ್ಲಿ ನೆಟ್ವರ್ಕ್ ಸಮಸ್ಯೆಯಿದೆ. ದೂರವಾಣಿಯಲ್ಲಿ ಮಾತನಾಡಲು ಹರಸಾಹಸಪಡಬೇಕು. ಇದರಿಂದಾಗಿ ವಿದ್ಯಾರ್ಥಿಗಳು ಆನ್‌ಲೈನ್ ಪಾಠ ಕೇಳಲು ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ಕೋವಿಡ್ ಕಾರಣದಿಂದ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರಿಗೂ ಸಮಸ್ಯೆ ಉಂಟಾಗಿದೆ. ನೆಟ್ವರ್ಕ್ ಸಮಸ್ಯೆ ಕುರಿತು ಶಾಸಕರಿಗೆ ಹಾಗೂ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಗುಡ್ಡದ ಮೇಲೆ, ನೆಟ್ವರ್ಕ್ ಸಿಗುವ ರಸ್ತೆ, ಅರಣ್ಯಗಳ ನಡುವೆ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದಾರೆ. ಕೈಯಲ್ಲಿ ಕೊಡೆ ಹಿಡಿದುಕೊಂಡು ಕೆಲವು ವಿದ್ಯಾರ್ಥಿಗಳಿಗೆ ಪೋಷಕರು ನೆರವಾದರೆ, ಇನ್ನೂ ಕೆಲವು ಕಡೆಗಳಲ್ಲಿ ಅರಣ್ಯ ಮತ್ತು ಗುಡ್ಡದಲ್ಲಿ ಕೂತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ರೇಖಾ ಕದಿರೇಶ್ ಹತ್ಯೆ ಕೇಸ್: ರೌಡಿ ಆತುಷ್ ವಿಚಾರಣೆಗೆ ಆಗ್ರಹಿಸಿ ಕಮಿಷನರ್ಗೆ ದೂರು