ಗದಗ: ಸದೃಢ ಮತ್ತು ಉತ್ತಮ ಭವಿಷ್ಯದ ರಾಜ್ಯ ನಿರ್ಮಾಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ 'ಚಲಿಸು ಕರ್ನಾಟಕ' ಸೈಕಲ್ ಜಾಥಾ ಬೆಳಗಾವಿಯಿಂದ ಗದಗ ಜಿಲ್ಲೆಗೆ ಬಂದು ತಲುಪಿತು.
ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶ ನಡೆಸಲಾಯಿತು. ಪಕ್ಷದ ಧ್ವಜ ನೀಡಿ ಹಲವು ಯುವಕರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಇಂದು ಬಳ್ಳಾರಿಯತ್ತ ಸೈಕಲ್ ಜಾಥಾ ತೆರಳಿದ್ದು, ರವಿಕೃಷ್ಣಾರೆಡ್ಡಿ ಸೈಕಲ್ ಏರಿ ಯಾತ್ರೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಿಂದ ಬಂದ ಒಬ್ಬರು ಮುಖ್ಯಮಂತ್ರಿಯಾದರೆ, ತಿಹಾರ್ ಜೈಲಿಗೆ ಹೋಗಿ ಬಂದ ಮತ್ತೊಬ್ಬರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಒಡೆದು ಹೋಗುತ್ತಿರುವ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ತಂದೆ-ಮಕ್ಕಳು ಹೆಣಗಾಡುತ್ತಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದರು.
ಮುಂದಿನ ದಿನಗಳಲ್ಲಿ ಕೆಆರ್ಎಸ್ ಪಕ್ಷವನ್ನು ಸಂಘಟನೆ ಮೂಲಕ ಬಲಪಡಿಸುತ್ತೇವೆ. ಮುಂಬರುವ ಮಸ್ಕಿ, ಬಸವ ಕಲ್ಯಾಣ, ಬೆಳಗಾವಿ ಉಪಚುನಾವಣೆ ಜೊತೆಗೆ ತಾಲೂಕು, ಜಿಲ್ಲಾ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.