ಗದಗ: ಕರ್ನಾಟಕದ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪಾಕಿಸ್ತಾನದಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ.
ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ರಾಜ್ಯದ ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಅಂತಾ ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರಕ್ಕೆ ಬೆಳಗಾವಿ ಅಲ್ಲ, ರಾಜ್ಯದ ಒಂದಿಂಚೂ ಜಾಗ ಕೊಡಲ್ಲ. ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತಿಯೋ ಆ ರೀತಿ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ ಅಂತ ಕಿಡಿಕಾರಿದ್ದಾರೆ.
ಬೆಳಗಾವಿ ಗಡಿಯೊಳಗೆ ಎಂಇಎಸ್ ಪುಂಡಾಟ ಮಾಡಿದರೆ ಹೊರಗಡೆ ಶಿವಸೇನೆ ಕಿರಿಕ್ ಮಾಡ್ತಿದೆ. ಇಂಥ ಪುಂಡಾಟಿಕೆ ಕರ್ನಾಟಕದಲ್ಲಿ ನಡೆಯಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರ ಅಷ್ಟೇ ಅಲ್ಲ, ರಾಜ್ಯದ ಯಾವುದೇ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ: ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ.. ಸಿಬಿಐ ಮರು ತನಿಖೆಗೆ ನಿರಾಕರಿಸಿದ ಹೈಕೋರ್ಟ್..
ಇನ್ನು ಕನ್ನಡದ ಗಂಧ ಗಾಳಿ ಇಲ್ಲದವರು ಕನ್ನಡದ ಬಗ್ಗೆ ಉಡಾಫೆಯ ಮಾತುಗಳನ್ನು ಆಡಿದರೆ ಸಹಿಸಲ್ಲ ಎಂದು ಖಾರವಾಗಿ ನುಡಿದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನ್ನಡಿಗರಿಗೆ ಆದ್ಯತೆ ನೀಡಲೇಬೇಕು ಎಂದು ಒತ್ತಾಯಿಸಿದರು.