ಗದಗ: ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಚಂದ್ರು ಲಮಾಣಿ ಅವರು ಕಾನೂನು ತೊಡಕಿನಿಂದ ಹೊರಬಂದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ. ಆರೋಗ್ಯ ಇಲಾಖೆಯೂ ಬುಧವಾರ ಡಾ ಚಂದ್ರು ಲಮಾಣಿ ಅವರಿಗೆ ಷರತ್ತು ಬದ್ಧ ರಾಜೀನಾಮೆ ಅಂಗೀಕರಿಸಿದ್ದರಿಂದ ನಿಟ್ಟುಸಿರುಬಿಟ್ಟಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಇತ್ತೀಚೆಗೆ ರಾಜೀನಾಮೆ ಪತ್ರ ಸಲ್ಲಿಸುವಂತೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಡಾ. ಚಂದ್ರು ಲಮಾಣಿಗೆ ಸೂಚನೆ ನೀಡಿದ್ದರು. ಅದೇ ರೀತಿ ಅವರ ರಾಜೀನಾಮೆ ಅಂಗೀಕರಿಸದಂತೆ ಜಿಲ್ಲಾಧಿಕಾರಿ ಕೂಡ ಪತ್ರ ಬರೆದಿದ್ದರು. ರಾಜಕೀಯ ಅಖಾಡಕ್ಕೆ ಧುಮಕಬೇಕು ಎನ್ನುವ ಕಾರಣಕ್ಕೆ ಸರ್ಕಾರಿ ವೈದ್ಯ ಹುದ್ದೆಗೆ 31 ಆಗಸ್ಟ್ 2021ಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಎರಡು ವರ್ಷಗಳಾದರೂ ಇದುವರೆಗೂ ಅವರ ರಾಜೀನಾಮೆ ಮಾತ್ರ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಡಾ. ಚಂದ್ರು ಲಮಾಣಿ ಕಾನೂನು ಸಂಕಷ್ಟಕ್ಕೆ ಈಡಾಗಿದ್ದರು.
ಇದರಿಂದ ಹಾಲಿ ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ಇನ್ನುಳಿದ ಬಂಡಾಯ ಅಭ್ಯರ್ಥಿಗಳು ತಮಗೆ ಟಿಕೆಟ್ ನೀಡುವಂತೆ ಒತ್ತಾಯ ಹೇರಿದ್ದರು. ಆದರೆ, ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ ಇರುವುದರಿಂದ ಚಂದ್ರು ಲಮಾಣಿ ಬಿ ಫಾರಂ ದಕ್ಕಿಸಿಕೊಂಡಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಷರತ್ತಿನೊಂದಿಗೆ ರಾಜೀನಾಮೆ ಅಂಗೀಕಾರ:
* ಲೋಕಾಯುಕ್ತ ವಿಚಾರಣೆಯಲ್ಲಿ ಹೊರಬರುವ ವರದಿ ಮೇರೆಗೆ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬದ್ಧವಾಗಿರಬೇಕು.
* ಸೇವಾವಧಿಯಲ್ಲಿ ಎಸಗಿರಬಹುದಾದ ಕರ್ತವ್ಯಲೋಪ ಕಂಡು ಬಂದಲ್ಲಿ ಮುಂದೆ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕು.
* ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದಲ್ಲಿ ಅದನ್ನ ಮುಂದುವರೆಸಲು ಬದ್ಧಗೊಳಿಸಿರುವುದು.
* ಸರ್ಕಾರಕ್ಕೆ ಬರಬೇಕಾದ ಬೇಬಾಕಿಗಳೇನಾದರೂ ಇದ್ದಲ್ಲಿ ಕಾನೂನು ರೀತಿ ವಸೂಲಿ ಮಾಡುವ ಕ್ರಮಕ್ಕೆ ಬದ್ಧರಾಗಿರಬೇಕು.
ಹೀಗೆ.. ಹಲವು ಷರತ್ತುಗಳನ್ನ ಹಾಕಿ ಡಾ ಚಂದ್ರು ಅವರ ರಾಜೀನಾಮೆಯನ್ನು ಆರೋಗ್ಯ ಇಲಾಖೆಯು ಅಂಗೀಕರಿಸಿದೆ. ಕೇಂದ್ರ ಚುನಾವಣಾ ಆಯೋಗದ ಮಾನದಂಡಗಳ ಪ್ರಕಾರ ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು. ಆದರೆ, ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ರಾಜೀನಾಮೆ ಸಲ್ಲಿಸಿದ್ದರೂ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಈಗಲೂ ಅವರು ಸರ್ಕಾರಿ ನೌಕರ ಎಂದು ಇತ್ತಿಚೇಗೆ ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು. ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತಮ್ಮ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ಆದರೆ ಅದು ಕೂಡ ಅಂಗೀಕಾರವಾಗಿಲ್ಲ ಎಂದು ಪತ್ರದಲ್ಲಿ ಜಿಲ್ಲಾಧಿಕಾರಿಗಳು ಉಲ್ಲೇಖಿಸಿದ್ದರು. ಈಗ ಆರೋಗ್ಯ ಇಲಾಖೆ ಡಾ ಚಂದ್ರು ಅವರ ರಾಜೀನಾಮೆ ಅಂಗೀಕರಿಸಿದ್ದು, ಅವರು ಕಾನೂನು ತೊಡಕಿನಿಂದ ಹೊರ ಬಂದಿದ್ಧಾರೆ.
ಓದಿ: ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ನೀಡಲು ಕಾನೂನು ತೊಡಕು: ತನಗೇ ಟಿಕೆಟ್ ಕೊಡುವಂತೆ ಹಾಲಿ ಶಾಸಕ ಪಟ್ಟು