ಗದಗ: ಆಯುಷ್ ಆಸ್ಪತ್ರೆಯನ್ನ ಪುನಃ ಬಿಟ್ಟುಕೊಡುವಲ್ಲಿ ಜಿಮ್ಸ್ ನಿರ್ದೇಶಕ ಪಿ.ಎಸ್. ಭೂಸರೆಡ್ಡಿ ಮತ್ತು ಆಯುಷ್ ಇಲಾಖೆಯ ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ. 2020ರಲ್ಲಿ ಜಿಮ್ಸ್ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಆಯುಷ್ ಆಸ್ಪತ್ರೆಯನ್ನ, ಕೊರೊನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಜಿಮ್ಸ್ ಸುಪರ್ದಿಗೆ ನೀಡಿತ್ತು.
ಸತತ ಮೂರು ವರ್ಷಗಳಿಂದ ಕೊರೊನಾ ರೋಗಿಗಳಿಗೆ ಆಯುಷ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗ್ತಿತ್ತು. ಅದರಲ್ಲೂ ಗದಗನಲ್ಲಿ ಕೊರೊನಾ ರೋಗಿಗಳ ಚಿಕಿತ್ಸಾ ಕೇಂದ್ರವಾಗಿ ಈ ಆಯುಷ್ ಆಸ್ಪತ್ರೆ ಚಿರಪರಿಚಿತವಾಗಿತ್ತು. ಆದ್ರೆ ಈಗ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಕೊರೊನಾ ರೋಗಿಗಳಿಗೆ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗ್ತಿದೆ ಎನ್ನಲಾಗ್ತಿದೆ. ಅಲ್ಲದೇ ಬೆಟಗೇರಿಯಲ್ಲಿನ ಹಳೆಯ ಆಯುಷ್ ಆಸ್ಪತ್ರೆಯ ಕಟ್ಟಡದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಬಹಳಷ್ಟು ಸ್ಥಳವಕಾಶದ ಕೊರತೆ ಇದೆ.
ಜಿಲ್ಲಾಡಳಿತಕ್ಕೆ ಮನವಿ: ಹಲವು ವಿಭಾಗಗಳ ಚಿಕಿತ್ಸಾ ಸಾಮಗ್ರಿಗಳಿಗೆ ಮತ್ತು ರೋಗಿಗಳಿಗೆ ಹಾಗೂ ವೈದ್ಯರ ಕಾರ್ಯಚಟುವಟಿಕೆಗಳಿಗೆ ಜಾಗದ ಅಭಾವ ಹೆಚ್ಚಾಗಿದೆ. ಹೀಗಾಗಿ ಹೊಸ ಕಟ್ಟಡವನ್ನ ಬಿಟ್ಟುಕೊಡಿ ಎಂದು ಆಯುಷ್ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಜಿಲ್ಲಾ ಮಂತ್ರಿಗಳು, ಲೋಕಲ್ ಮಿನಿಸ್ಟರ್ ಮತ್ತು ಶಾಸಕರೂ ಸಹ ಜಿಮ್ಸ್ ನಿರ್ದೇಶಕರಿಗೆ ಮೌಕಿಕವಾಗಿ ಆಸ್ಪತ್ರೆ ಪುನಃ ಆಯುಷ್ ಇಲಾಖೆಗೆ ಹಸ್ತಾಂತರಿಸುವಂತೆ ಹೇಳಿದ್ದಾರಂತೆ. ಜೊತೆಗೆ ಜಿಲ್ಲಾಧಿಕಾರಿಗಳು ಸಹ ಜಿಮ್ಸ್ ನಿರ್ದೇಶಕ ಪಿಎಸ್ ಭೂಸರೆಡ್ಡಿಯವರಿಗೆ ಆಸ್ಪತ್ರೆ ಬಿಟ್ಟುಕೊಡುವಂತೆ ತಿಳಿಸಿದ್ದಾರಂತೆ.
ಇದನ್ನೂ ಓದಿ: ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸೆಕೆಂಡ್ ಟಾಪರ್.. ಮುಂದಿನ ಶಿಕ್ಷಣಕ್ಕಾಗಿ ಕೂಲಿ ಕೆಲಸಕ್ಕೆ ಗುಳೇ ಹೋಗಿರೋ ವಿದ್ಯಾರ್ಥಿ..
ಆದ್ರೂ ಸಹ ಹೊಸ ಕಟ್ಟಡ ಸಂಪೂರ್ಣ ನಿರ್ಮಾಣವಾಗುವವರೆಗೂ ಆಸ್ಪತ್ರೆ ಬಿಟ್ಟುಕೊಡೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರಂತೆ. ಹೀಗಾಗಿ ಓಪಿಡಿ ರೋಗಿಗಳಿಗೆ ಚಿಕಿತ್ಸೆಯನ್ನು ಗದಗ ನಗರದ ಹಳೆಯ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿ ಕೊಡಲಾಗ್ತಿದೆ. ಅಲ್ಲಿ ಆಯುಷ್ ಇಲಾಖೆಯ ಆಯುರ್ವೇದ ಚಿಕಿತ್ಸೆಯ ಸಾಮಗ್ರಿಗಳನ್ನ ಇಡಲು ಸಾಕಷ್ಟು ತೊಂದರೆಯಾಗ್ತಿದೆ. ಹಾಗಾಗಿ ಆಸ್ಪತ್ರೆ ಬಿಟ್ಟುಕೊಡುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಉಪ್ಪಿನ್ ಒತ್ತಾಯಿಸಿದ್ದಾರೆ.