ಗದಗ: ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆ ಸ್ನೇಹಿತ ಹಾಗೂ ಆತನ ಸಹೋದರರು ಸೇರಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಬಸವರಾಜು ಕೊಲೆಯಾದ ವ್ಯಕ್ತಿ. ಪಂಚಪ್ಪ, ರವಿ ಹಾಗೂ ಮಹೇಶ್ ಕೊಲೆ ಮಾಡಿರುವ ಆರೋಪಿಗಳು. ಮಹೇಶ್ ಹಾಗೂ ಕೊಲೆಯಾಗಿರುವ ಬಸವರಾಜ್ ಚೆಡ್ಡಿ ಸ್ನೇಹಿತರು. ಗೆಳೆಯರು ಅಂದ ಮೇಲೆ ಒಬ್ಬರ ಮನೆಗೆ ಒಬ್ಬರು ಬರೋದು ಹೋಗೋದು ಇದ್ದೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್, ಮೂವರು ಅಣ್ಣತಮ್ಮಂದಿರಲ್ಲಿ ಒಬ್ಬರಾದ ಪಂಚಪ್ಪನ ಮಡದಿಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದ ಎನ್ನಲಾಗುತ್ತಿದೆ.
![Gadaga](https://etvbharatimages.akamaized.net/etvbharat/prod-images/3904632_thu.jpg)
ಹಲವು ವರ್ಷಗಳಿಂದ ಈತ ಪಂಚಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇತ್ತೀಚೆಗೆ ಇದು ಪಂಚಪ್ಪ ಹಾಗೂ ಆತನ ಸಹೋದರರಿಗೆ ತಿಳಿದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಮೂರೂ ಜನ ಅಣ್ಣತಮ್ಮಂದಿರು ನಿನ್ನೆ ರಾತ್ರಿ ಬಸವರಾಜನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ತಾಯಿ ಮತ್ತು ಅಜ್ಜಿ ಮೇಲೆ ಹಲ್ಲೆ ಮಾಡಿದ್ದು, ಬಸವರಾಜುವಿನ ಮೇಲೆ ಕಲ್ಲು ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ತಾವು ತಂದಿದ್ದ ಬೈಕ್ನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ, ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೇ ನಿಲ್ದಾಣದ ಬಳಿ ಹಳಿಯಲ್ಲಿ ಬಿಸಾಕಿ ಹೋಗಿದ್ದಾರೆ.
ಕೊಲೆ ಮಾಡಿರುವ ಆರೋಪದಡಿಯಲ್ಲಿ ಪಂಚಪ್ಪ ಹಾಗೂ ರವಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮಹೇಶ್ ಪರಾರಿಯಾಗಿದ್ದಾನೆ. ಶವವನ್ನು ರೈಲು ಹಳಿಯ ಮೇಲೆ ಬಿಸಾಕಿದ್ದರಿಂದ ರೈಲು ಮೃತದೇಹದ ಮೇಲೆ ಹರಿದು ಬಸವರಾಜ ದೇಹ ಎರಡು ತುಂಡಾಗಿರುವ ಸ್ಥಿತಿಯಲ್ಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮಹೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.