ಬೆಂಗಳೂರು: ಆರೋಗ್ಯ ಇಲಾಖೆ ಗದಗ ಜಿಲ್ಲಾ ಆಸ್ಪತ್ರೆಗೆ 500 ಎಲ್.ಪಿ.ಎಂ. ಸಾಮರ್ಥ್ಯದ ಆಕ್ಸಿಜನ್ ಘಟಕ ಮಂಜೂರು ಮಾಡಿದ್ದು, ಅದನ್ನು 3000 ಎಲ್.ಪಿ.ಎಂ ಸಾಮರ್ಥ್ಯದ ಘಟಕ ಸ್ಥಾಪಿಸಲು ಆಗ್ರಹಿಸಿ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಸಿಎಂಗೆ ಪತ್ರ ಬರೆದಿದ್ದಾರೆ.
ಗದಗ ಜಿಲ್ಲಾ ಆಸ್ಪತ್ರೆ 400+400 ಹಾಸಿಗೆ ಆಸ್ಪತ್ರೆ ಆಗಲಿದೆ. ಅದರ ಜೊತೆಗೆ ಆಯುಷ್ ಆಸ್ಪತ್ರೆ ಅದೇ ಪರಿಸರದಲ್ಲಿರುವುದರಿಂದ ಈ ಸಣ್ಣ ಘಟಕ ಇಷ್ಟು ದೊಡ್ಡ ಪ್ರಮಾಣದ ಹಾಸಿಗೆಗಳ ಅವಶ್ಯಕತೆಯನ್ನು ಪೂರೈಸಲಾರದು. ಈ ಸಣ್ಣ ಘಟಕದ ಬದಲಾಗಿ ಕನಿಷ್ಠ 3000 ಎಲ್.ಪಿ.ಎಂ. ಸಾಮರ್ಥ್ಯದ ಘಟಕ ಸ್ಥಾಪಿಸುವುದು ಅವಶ್ಯಕವಾಗಿದೆ. ಆದ್ದರಿಂದ 3000 ಎಲ್.ಪಿ.ಎಂ ಸಾಮರ್ಥ್ಯದ ಘಟಕ ಸ್ಥಾಪಿಸಲು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
500ಎಲ್.ಪಿ.ಎಂ. ಸಾಮರ್ಥ್ಯದ ಈ ಘಟಕ ಕೇವಲ ಹೆಸರಿಗೆ ಮಾತ್ರ ಸ್ಥಾಪನೆಯಾದಂತೆ ಆಗುತ್ತದೆಯೇ ಹೊರತು ಗದಗ ಆಸ್ಪತ್ರೆಯ ಅವಶ್ಯಕತೆಗಳನ್ನು ಪೂರೈಸಲಾರದು. ಹೀಗೆ ಹೆಸರಿಗೆ ಮಾತ್ರ ಘಟಕ ಹಾಕಿದರೇನು ಪ್ರಯೋಜನ?. ಈಗ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಘಟಕ ಒಂದು ತಾಸಿಗೆ 4.5 ಜಂಬೋ ಸಿಲೆಂಡರ್ ಮಾತ್ರ ಭರ್ತಿ ಮಾಡುತ್ತದೆ. ಅಂದರೆ ಒಂದು ದಿನಕ್ಕೆ 60-70 ಸಿಲಿಂಡರ್ ಮಾತ್ರ. ಕೋವಿಡ್ ನಂತಹ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವಾಗ ಈ ಸಾಮರ್ಥ್ಯ ಯಾವುದಕ್ಕೂ ಸಾಲದು. ಈ ಹಿನ್ನೆಲೆಯಲ್ಲಿ 3000 ಎಲ್.ಪಿ.ಎಂ ಸಾಮರ್ಥ್ಯದ ಘಟಕ ಸ್ಥಾಪಿಸಲು ಆಗ್ರಹಿಸಿದ್ದಾರೆ.