ಗದಗ: ಜಿಲ್ಲೆಯ ಭೈರಾಪುರ ಬೆಟ್ಟದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಹಿಟ್ಲರ್ ಕೀಟವೊಂದು ಕುತೂಹಲ ಕೆರಳಿಸಿದೆ. ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಅಪರೂಪದ ಕೀಟವಿದು. ಹಳದಿ ಮೈ ಬಣ್ಣದಿಂದ ಕೂಡಿರುವ ಕೀಟ ಸುಂದರವಾಗಿ ಗೋಚರಿಸಿದೆ.
ವೈಜ್ಞಾನಿಕವಾಗಿ ಈ ಜೀವಿಯನ್ನು 'ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್' ಎಂದು ಕರೆಯುವರು. ಸಾಮಾನ್ಯ ಭಾಷೆಯಲ್ಲಿ ಇದಕ್ಕೆ 'ಹಿಟ್ಲರ್ ಕೀಟ' ಎಂದೇ ಹೆಸರು. ಇಕ್ಸೋರಾ, ಗೇರು ಗಿಡ, ಗುಲ್‌ಮೋಹರ್ ಮತ್ತು ಶಿವನಿ ಮರಗಳು ಇವುಗಳಿಗೆ ಆತಿಥೇಯ ಸಸ್ಯಗಳಾಗಿವೆ.
ಈ ಕೀಟವು 30ಎಂ.ಎಂ ಗಾತ್ರ ಹೊಂದಿರುತ್ತದೆ. ಆಶ್ರಯಿತ ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150-200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟ 7 ರಿಂದ 9 ತಿಂಗಳ ಜೀವಿತಾವಧಿ ಹೊಂದಿದೆ. ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವಂತೆ.
ಪೆಂಟ್ಯಾಟೊಮಿಡೆ ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪು ಗುಂಪಾಗಿ (ಅಗ್ರಿಗೇಶನ್) ಆತಿಥೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡಾ ಸಹಾಯವಾಗಿದೆ. ಇವು ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ.
ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ, ಮಡಗಾಸ್ಕರ್, ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಪಪುವಾ ನ್ಯೂಗಿನಿ , ಜಪಾನ್, ದಕ್ಷಿಣ ಕೊರಿಯಾ ಹಾಗು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿವೆ. ಕೀಟಗಳು ಉನ್ನತ ಸ್ತರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇವುಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂತ್ರಿಸಲ್ಪಡುತ್ತವೆ. ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ, ಸಂಗಮೇಶ ಕಡಗದ ಹಾಗೂ ಶರಣು ಗೌಡರ ಈ ವಿಶಿಷ್ಠ ಕೀಟವನ್ನು ಗುರುತಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ