ಗದಗ : ತಾಲೂಕಿನ ಕಣವಿ-ಹೊಸೂರು ಗ್ರಾಮದಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಕೇವಲ ಬಾವಿ, ಕೊಳವೆ ಬಾವಿಗಳು, ಕೆರೆಗಳು ತುಂಬಿ ಹರಿದಿದ್ರೆ ಸಾಕಾಗಿತ್ತು. ಅದು ಎಷ್ಟರಮಟ್ಟಿಗೆ ಅಂದರೆ ನೆಲದಿಂದ ನೀರು ಉಕ್ಕಿ ಮನೆಯೊಳಗೆ ಹರಿಯುತ್ತಿದೆ. ಗ್ರಾಮದ ಲಕ್ಕಪ್ಲ ಶೆಟ್ಟರ್, ಗರಡಿ ಮನೆ, ಮತ್ತು ದೇಶಪಾಂಡೆಯವರ ಮನೆ ಗೋಡೆಗಳಿಂದ ಅಂತರ್ಜಲ ಉಕ್ಕಿ ಹರಿಯುತ್ತಿದ್ದು, ಬೆಟ್ಟ -ಗುಡ್ಡಗಳಲ್ಲಿ ಹರಿಯುವ ಝರಿಗಳಂತೆ ಗೋಡೆಗಳಿಂದ ನೀರು ಹರಿದು ಬರ್ತಿದೆ.
ಮನೆಯ ಅಡಿಪಾಯದಿಂದ ಸಣ್ಣ ಪ್ರಮಾಣದಲ್ಲಿ ನೀರು ಹೊರಗಡೆ ಹರಿದು ಬರುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದು, ರಾತ್ರಿ ಏನಾದರೂ ಅನಾಹುತ ಸಂಭವಿಸಬಹುದೇ? ಎಂಬ ಭಯದಿಂದ ದೇವಸ್ಥಾನಗಳಿಗೆ ಮಲಗಲು ಹೋಗುತ್ತಿದ್ದಾರೆ.
ಕೇವಲ ಹೊಸೂರು ಗ್ರಾಮದಲ್ಲಿ ಮಾತ್ರವಲ್ಲದೇ, ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿಯೂ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಸುಮಾರು 20 ಕ್ಕೂ ಹೆಚ್ಚು ಮನೆಗಳಲ್ಲಿ ನೀರು ಶೇಖರಣೆಯಾಗಿದ್ದು, ಗ್ರಾಮಸ್ಥರು ಪಂಪಸೆಟ್ ಮೂಲಕ ತುಂಬಿದ ನೀರನ್ನು ಹೊರಗಡೆ ಹಾಕುತ್ತಿದ್ದಾರೆ.
ಗ್ರಾಮದ ಯಲ್ಲಪ್ಲರಿಗೆ ಸೇರಿದ ಮನೆಯ ಹಿಂದಿರುವ ಹಿತ್ತಲ ಭಾಗದ ಗೋಡೆಯಲ್ಲಿ ನೀರು ಜಿನುಗುತ್ತಿದ್ದು, ಪರಿಣಾಮ ಮನೆಯೊಳಗೆ ಅಪಾರ ಪ್ರಮಾಣದ ನೀರು ತುಂಬಿಕೊಂಡು ಮನೆ ಮಂದಿಯಲ್ಲಾ ಪರದಾಡುವಂತಾಗಿದೆ. ಸುಮಾರು 15 ಜನರಿರುವ ಇವರ ಮನೆ ಸದಸ್ಯರೆಲ್ಲರನ್ನೂ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ಹಲವು ಮನೆಗಳು ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿವೆ.
ಈ ಬಗ್ಗೆ ಗದಗ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದರಿಂದ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಆದರೆ, ಒಮ್ಮೆ ಬಂದು ಹೋದ ಅಧಿಕಾರಿ ವರ್ಗ ಇತ್ತ ಸುಳಿಯಲೇ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.