ಗದಗ: ಜಿಲ್ಲೆಯಲ್ಲಿ ಹಲವೆಡೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಯಾಗಿದೆ. ಸುಮಾರು 3 ಗಂಟೆ ಸುರಿದ ಮಳೆಗೆ ರಾತ್ರಿಯಿಡೀ ಜನ-ಜಾನುವಾರುಗಳು ಹೈರಾಣಾಗಿವೆ.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು, ವಾಸನ, ನವಬೂದಿಹಾಳ ಗ್ರಾಮಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಮನೆಯಲ್ಲಿದ್ದ ದವಸ-ಧಾನ್ಯಗಳು, ಗೃಹ ಉಪಯೋಗಿ ವಸ್ತುಗಳೆಲ್ಲಾ ನೀರುಪಾಲಾಗಿ ಮಕ್ಕಳು, ಮಹಿಳೆಯರು, ವೃದ್ಧರು ಸಾಕಷ್ಟು ಪರದಾಡಿದ್ದಾರೆ. ವಾಸನ, ನವಬೂದಿಹಾಳ ಜಲಾವೃತವಾದ ಪರಿಣಾಮ ಅಲ್ಲಿನ ಜನರು ಭಯ ಹಾಗೂ ಆತಂಕಕ್ಕೆ ಒಳಗಾಗಿದ್ದರು. ಹಾಗಾಗಿ ನರಗುಂದ ಪೊಲೀಸ್ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ಜಿಲ್ಲೆಯ ಕೊಣ್ಣೂರು ಬಳಿ ರಾಷ್ಟ್ರೀಯ ಹೆದ್ದಾರಿ ಸಹ ಸಂಪೂರ್ಣ ಜಲಾವೃತವಾಗಿದೆ. ಹುಬ್ಬಳ್ಳಿ-ವಿಜಯಪುರ ಮೂಲಕ ಸೊಲ್ಲಾಪುರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕೊಣ್ಣೂರು ಬಳಿ ಜಲಾವೃತವಾದ್ದರಿಂದ ವಾಹನ ಸವಾರರು ಸಾಕಷ್ಟು ಪರದಾಡಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.