ಗದಗ: ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಡ್ಯಾಂಗೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ 8 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದಲ್ಲದೆ ಡ್ಯಾಂಗೆ ಬರುತ್ತಿರುವ ನೀರನ್ನೂ ಸಹ ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗದಗ ಜಿಲ್ಲೆ ನರಗುಂದ ತಾಲೂಕಿನ ಲಕಮಾಪುರ ಗ್ರಾಮದ ಹೊಲಗಳು ಜಲಾವೃತವಾಗಿವೆ. ಕಳೆದ ತಿಂಗಳಷ್ಟೇ ಇಡೀ ಲಕಮಾಪುರ ಗ್ರಾಮ ಮಲಪ್ರಭೆ ಪ್ರವಾಹಕ್ಕೆ ತುತ್ತಾಗಿತ್ತು. ಇನ್ನೇನು ಪ್ರವಾಹ ಪರಿಸ್ಥಿತಿಯಿಂದ ಚೇತರಿಸಕೊಳ್ಳೋ ಮುನ್ನವೇ ಮತ್ತೆ ಲಕಮಾಪುರ ಗ್ರಾಮ ಪ್ರವಾಹದ ಭೀತಿಗೆ ಒಳಗಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗ್ಲೇ ಗ್ರಾಮದಲ್ಲಿ ಡಂಗುರ ಸಾರಿಸೋ ಮೂಲಕ ಎಚ್ಚರಿಕೆಯನ್ನೂ ನೀಡಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ನರಗುಂದ ತಾಲೂಕಿನ ಬೂದಿಹಾಳ, ರೋಣ ತಾಲೂಕಿನ ಹೊಳೆ ಆಲೂರು, ಹೊಳೆ ಮಣ್ಣೂರು, ಮೆಣಸಗಿ ಗ್ರಾಮಸ್ಥರನ್ನೂ ಸಹ ಸ್ಥಳಾಂತರ ಮಾಡಲಾಗ್ತಿದೆ. ಹೊರಹರಿವು 20 ಸಾವಿರ ತಲುಪುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಗದಗ ಎಸಿ ಮಂಜುನಾಥ್ ಸ್ಪಷ್ಟನೆ ಮಾಡಿದ್ದಾರೆ.