ಗದಗ : ನಗರದಲ್ಲಿರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣವೂ ಸೇರಿದಂತೆ ಎಲ್ಲೆಲ್ಲಿ ನಿರ್ಗತಿಕರು, ವೃದ್ಧ ಪ್ರಯಾಣಿಕರು, ಭಿಕ್ಷುಕರು ಚಳಿಯಿಂದ ನಡುಗುತ್ತಿರುತ್ತಾರೋ ಅಂತವರಿಗೆಲ್ಲ ವಿದ್ಯಾರ್ಥಿಗಳ ತಂಡವೊಂದು ಹೊದಿಕೆಗಳನ್ನ ನೀಡಿ ಸಮಾಜಮುಖಿ ಕೆಲಸ ಮಾಡ್ತಿದೆ.
ಈ ಬಾರಿ ವಿಪರೀತ ಚಳಿ ಇದೆ. ಅದೆಷ್ಟೋ ನಿರ್ಗತಿಕರು, ಭಿಕ್ಷುಕರು ತಮಗೊಂದು ಸೂರಿಲ್ಲದ ಕಾರಣ ಇಂತಹ ಕೊರೆಯುವ ಚಳಿಯಲ್ಲೇ ಇರುತ್ತಾರೆ. ಎಲ್ಲೋ ಬಸ್ ನಿಲ್ದಾಣವೋ, ರೈಲ್ವೆ ನಿಲ್ದಾಣದ ಆವರಣದಲ್ಲೋ ಇಲ್ಲ ಯಾವುದೋ ಮಠಗಳ ಆವರಣದಲ್ಲಿ ಕಾಲ ಕಳೆಯುತ್ತಿರುತ್ತಾರೆ. ಇವರ ಸಹಾಯಕ್ಕೆ ನಗರದ ಎಎಸ್ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಕಂಬಳಿ ವಿತರಣೆ : ಎನ್ಎಸ್ಎಸ್ ಘಟಕದ ಸುಮಾರು 25ಕ್ಕೂ ವಿದ್ಯಾರ್ಥಿಗಳು ತಮಗೆ ಸಾಧ್ಯವಾದಷ್ಟು ಹಣವನ್ನು ಹಾಕಿ, ಹಾಗೇ ಸಂಸ್ಥೆಯಿಂದಲೂ ಸ್ವಲ್ಪ ಹಣ ಪಡೆದು ಹೊದಿಕೆಗಳನ್ನ ಖರೀದಿ ಮಾಡಿದ್ದಾರೆ. ಯಾರು ಚಳಿಯಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ಇವುಗಳನ್ನ ವಿತರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದಲ್ಲಿ ವಿದ್ಯಾರ್ಥಿಗಳು ಈ ರೀತಿಯ ಸತ್ಕಾರ್ಯ ಮಾಡ್ತಿದ್ದಾರೆ.
ಪ್ರಯಾಣಿಕರಿಂದ ಮೆಚ್ಚುಗೆ : ಇನ್ನೂ ಕೆಲವು ಬಾರಿ ರೈಲು ಹಾಗೂ ಬಸ್ ತಪ್ಪಿದ್ದರಿಂದಾಗಿ ಮಕ್ಕಳು, ಮಹಿಳೆಯ, ಹಿರಿಯರು ಬಸ್ ನಿಲ್ದಾಣದಲ್ಲಿ ಕೊರೆಯುವ ಚಳಿಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೂ ಉಚಿತವಾಗಿ ಹೊದಿಕೆಗಳನ್ನ ನೀಡುತ್ತಾರೆ. ಇವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯೂ ಸಿಕ್ತಿದೆ.
ಇದನ್ನೂ ಓದಿ: ಪ್ರಧಾನಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಸಾರ್ವಜನಿಕರ ಹಣ ಬಳಕೆ ಮಾಡುತ್ತಿದ್ದಾರೆ : ಖರ್ಗೆ ಕಿಡಿ