ಗದಗ: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಎಸ್ಪಿ ಬಿ.ಎಸ್. ನೇಮಗೌಡ ಅವರು ಮೊಬೈಲ್ಗಳನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಳೆದುಕೊಂಡ ಮೊಬೈಲ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ. ಈ ಮೂಲಕ ಶನಿವಾರ ಒಟ್ಟು 82 ಮೊಬೈಲ್ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಲಾಗಿದೆ. ನಗರದ ಟೌನ್ ಪಿಎಸ್ನಿಂದ 3, ರೂರಲ್ ಪಿಎಸ್ನಿಂದ- 5, ಬೆಟಿಗೇರಿ ಪಿಎಸ್ನಿಂದ- 2, ಲಕ್ಷ್ಮೇಶ್ವರ ಪಿಎಸ್- 3, ಶಿರಹಟ್ಟಿ ಪಿಎಸ್- 3, ನರಗುಂದ ಪಿಎಸ್- 5, ರೋಣ ಪಿಎಸ್- 8, ಗಜೇಂದ್ರಗಡ ಪಿಎಸ್- 4, ಮುಂಡರಗಿ ಪಿಎಸ್- 10, ನರೇಗಲ್ ಪಿಎಸ್- 1, ಸಿಇಎನ್ಪಿಎಸ್- 6, ಟೆಕ್ ಸೆಲ್- 28 ಸೇರಿದಂತೆ ಒಟ್ಟು 12 ಲಕ್ಷ 11 ಸಾವಿರ ಬೆಲೆ ಬಾಳುವ 82 ಮೊಬೈಲ್ ಹಸ್ತಾಂತರಿಸಿದ್ದೇವೆ'' ಎಂದರು.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ಗಳನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಬೇಕು ಎಂದು ಅವರು, ಮೊಬೈಲ್ ಪತ್ತೆಗಾಗಿ ನಾವು ವಿಶೇಷ ಜಾಗೃತಿ ವಹಿಸುತ್ತಿದ್ದು, ಮೊಬಿಫೈ ಹಾಗೂ ಸಿಈಆರ್ಐನಲ್ಲಿ ಕಳೆದುಹೋದ ಮೊಬೈಲ್ ಪತ್ತೆಗೆ ಕ್ರಮ ವಹಿಸುತ್ತೇವೆ ಎಂದರು. ಶನಿವಾರ ಹಸ್ತಾಂತರಿಸಿದ ಮೊಬೈಲ್ಗಳನ್ನು ಅಂತರ್ ಜಿಲ್ಲೆ ಹಾಗೂ ಅಂತರ ರಾಜ್ಯದಿಂದ ಪತ್ತೆ ಹಚ್ಚಿ ತಂದಿದ್ದೇವೆ. ಮೊಬೈಲ್ ಪತ್ತೆಹಚ್ಚಲು ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದರು.
ಏನಿದು ಮೊಬಿಫೈ ಆ್ಯಪ್?: "ಮೊಬೈಲ್ ಕಳೆದುಕೊಂಡರೆ ಇನ್ಮುಂದೆ ಹೆದರಬೇಡಿ. ಕಳೆದುಹೋದ ಮೊಬೈಲ್ಗಳನ್ನು ಪತ್ತೆ ಮಾಡಲು ತಾಂತ್ರಿಕ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ" ಎಂದು ಎಸ್ಪಿ ಬಿ.ಎಸ್. ನೇಮಗೌಡ ಇತ್ತೀಚೆಗೆ ಹೇಳಿದ್ದರು. ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ''ಮೊಬೈಲ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಎಂಬುದರ ಕುರಿತು ಮಾಹಿತಿ ನೀಡಿದ್ದರು. " ಪೊಲೀಸ್ ಇಲಾಖೆಯು 'ಮೊಬಿಫೈ (MobiFi)' ಎನ್ನುವ ಆ್ಯಪ್ ಸಿದ್ದಪಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಕಳೆದು ಹೋಗಿರುವ ಮೊಬೈಲ್ ಅನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಇದಕ್ಕೆ ವಿಧಾನಗಳಿದ್ದು, ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ. ಮೊಬೈಲ್ ಕಳೆದುಕೊಂಡ ತಕ್ಷಣ ಯಾರೂ ಕೂಡ ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಆ್ಯಪ್ನಲ್ಲಿ ತುಂಬಿದರೆ ಸಾಕು. ಸರಳವಾಗಿ ನಿಮ್ಮ ಮೊಬೈಲ್ ಅನ್ನು ಮತ್ತೆ ನಿಮ್ಮ ಕೈ ಸೇರುತ್ತದೆ" ಎಂದು ಅವರು ತಿಳಿಸಿದ್ದರು.
"ಬೇರೆಯವರ ಅಥವಾ ಸಂಬಂಧಿಕರ ಮೊಬೈಲ್ನ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್ಗೆ Hi ಅಂತ ಮೆಸೇಜ್ ಕಳುಹಿಸಬೇಕಾಗುತ್ತದೆ. ತಕ್ಷಣವೇ ಮೊಬೈಲ್ ವಾಟ್ಸ್ಆ್ಯಪ್ಗೆ ಒಂದು ಲಿಂಕ್ ಮೆಸೇಜ್ ಬರುತ್ತದೆ. ಆ ಲಿಂಕ್ ಓಪನ್ ಮಾಡಿ ತಮ್ಮ ಕಳೆದು ಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಭರ್ತಿಯಾದ ಮಾಹಿತಿ ಮೇರೆಗೆ ಪ್ರಕರಣ ದಾಖಲಾಗುತ್ತದೆ. ದೂರಿನ ಅನ್ವಯ ಕಳೆದು ಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಮೂಲಕ ಹುಡುಕಲು ಸಾಧ್ಯವಾಗುತ್ತದೆ. ಒಂದು ವೇಳೆ ಪತ್ತೆಯಾಗದೇ ಇದ್ದರೇ, ಆ ಕಳೆದು ಹೋಗಿರುವ ಮೊಬೈಲ್ ಅನ್ನೇ ಬ್ಲಾಕ್ ಆಗುತ್ತದೆ'' ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕಳೆದು ಹೋದ ಮೊಬೈಲ್ ಶೋಧಕ್ಕೆ CIER ಉಪಕಾರಿ: ಮಂಗಳೂರಿನಲ್ಲಿ 30 ಮಂದಿಗೆ ಫೋನ್ ಹಸ್ತಾಂತರ