ಗದಗ: ಅನೇಕ ವಿವಿಐಪಿ, ವಿಐಪಿಗಳ ಭದ್ರತಾ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಗದಗ ಪೊಲೀಸ್ ಇಲಾಖೆಯ ನೆಚ್ಚಿನ ಶ್ವಾನ ಸ್ವಾತಿ ಇಂದು ಹೃದಯಾಘಾತದಿಂದ ಸಾವನ್ನಪ್ಪಿ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. 2013ರಿಂದ ಸುಮಾರು 11 ವರ್ಷ 07 ತಿಂಗಳು ಕಾಲ ಸ್ಪೋಟಕ ವಸ್ತುಗಳ ಗುರುತು ಪತ್ತೆ ಶ್ವಾನವಾಗಿ ಕರ್ತವ್ಯ ನಿರ್ವಹಿಸಿತ್ತು. ಲ್ಯಾಬ್ರಡಾರ್ ಎಂಬ ಹೆಣ್ಣು ಶ್ವಾನ 2011ರಲ್ಲಿ ಜನಿಸಿತ್ತು.
ಇದನ್ನ ನಿವೃತ್ತ ಇಂಜಿನಿಯರ್ ಒಬ್ಬರು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದ್ದರು. ಇದು 10 ತಿಂಗಳಗಳ ಕಾಲ ಬೆಂಗಳೂರಿನ ಆಡುಗೋಡಿಯ ಪೊಲೀಸ್ ಶ್ವಾನ ದಳ ತರಬೇತಿ ಇಲಾಖೆಯಲ್ಲಿ ತರಬೇತಿ ಪಡೆದಿತ್ತು. ಜಿಲ್ಲೆ ಮತ್ತು ಕರ್ನಾಟಕ ರಾಜ್ಯಾದ್ಯಂತ ಸುಮಾರು 95 ಪ್ರಕರಣಗಳಲ್ಲಿ ಭಾಗಿಯಾಗಿರೋ ಹೆಗ್ಗಳಿಕೆ ಈ ಶ್ವಾನಕ್ಕಿದೆ.
ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಗೃಹ ಮಂತ್ರಿ, ಗೋವಾ ಬ್ರಿಕ್ಸ್ ಶೃಂಗ ಸಭೆ, ಜೊತೆಗೆ ವಿವಿಐಪಿ, ವಿಐಪಿಗಳಿಗೆ ಭದ್ರತಾ ಕರ್ತವ್ಯ ನಿರ್ವಹಿಸಿದೆ ಹೆಮ್ಮೆಯಿದೆ. ಕೊನೆಯದಾಗಿ ಆರ್.ಎಸ್.ಎಸ್. ಸರ ಸಂಚಾಲಕ ಮೋಹನ್ ಭಾಗವತ್ ಅವರ ಪ್ರವಾಸದ ವೇಳೆ ಭದ್ರತಾ ಕರ್ತವ್ಯ ನಿರ್ವಹಿಸಿತ್ತು. ಆದರೆ ಇಂದು ಏಕಾಏಕಿ ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದೆ. ಇನ್ನು ಗದಗ ಪೊಲೀಸ್ ಇಲಾಖೆ ಶ್ವಾನ ಅಗಲಿಕೆಗೆ ಕಂಬನಿ ಮಿಡಿದಿದೆ. ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದೆ.
ಇದನ್ನೂ ಓದಿ: ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿ ಆರೋಪ: ಹೈಕೋರ್ಟ್ ಜಾಮೀನು