ಗದಗ: ಅವಧಿಗೂ ಮುನ್ನ ಹೆರಿಗೆಯಾಗಿದ್ದರಿಂದ ಆ ಮಗು ಜಗತ್ತು ನೋಡುವ ಮುನ್ನವೇ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡ್ತಿತ್ತು. ಉಸಿರಾಡಲು ಶ್ವಾಸಕೋಶವೇ ಬೆಳೆದಿರಲಿಲ್ಲ... ಜಗತ್ತು ನೋಡಲು ಕಣ್ಣು ತೆರೆದಿರಲಿಲ್ಲ... ಅಮ್ಮನ ಜೋಗುಳ ಕೇಳಲು ಕಿವಿಗಳಿಗೆ ಶಕ್ತಿ ಇರಲಿಲ್ಲ... ದೇಹದ ಭಾಗಗಳೂ ಸಹ ಬೆಳವಣಿಗೆಯಾಗದೇ ಪ್ರಾಣ ಸಂಕಟಕ್ಕೆ ಸಿಲುಕಿತ್ತು. ಆದರೆ ಜಿಮ್ಸ್ ವೈದ್ಯರು ದೇವರಾಗಿ ಬಂದ ಮಗುವಿಗೆ ಮರುಜನ್ಮ ನೀಡಿದ್ದಾರೆ. ಸತತ ಮೂರು ತಿಂಗಳ ಕಾಲ ವೈದ್ಯರ ಶ್ರಮ ಪವಾಡದಂತೆ ಬದಲಾಗಿ ಮಗುವಿ ಮರುಹುಟ್ಟು ಪಡೆದಿದೆ.
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಅಚ್ಚರಿಗೆ ಈ ಘಟನೆ ಸಾಕ್ಷಿಯಾಗಿದೆ. ಈ ಮೂಲಕ ನಿಜಕ್ಕೂ ಪೋಷಕರ ಕಣ್ಣಲ್ಲಿ ವೈದ್ಯರು ದೇವರಂತೆ ಕಾಣಿಸಿದ್ದಾರೆ. ಅಂದಹಾಗೆ ಗದಗ ತಾಲೂಕಿನ ದುಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆಗೆ ಗದಗನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿ ಪೂರ್ಣ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಗಂಡು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಗರ್ಭಧರಿಸಿ ಕೇವಲ 24 ವಾರಗಳು ಮಾತ್ರ ಆಗಿದ್ದರಿಂದ ಕೂಸುಗಳು ಬೆಳವಣಿಗೆ ಆಗಿರಲಿಲ್ಲ. ಹೀಗಾಗಿ ಹುಟ್ಟಿದ ಎರಡನೇ ದಿನಕ್ಕೆ ಹೆಣ್ಣು ಮಗುವೊಂದು ತೀರಿಹೋಗುತ್ತೆ. ಆದರೆ ಒಂದು ಗಂಡು ಮಗು ಸಹ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಯಾಕೆಂದರೆ ಆ ಮಗುವಿನ ತೂಕ ಕೇವಲ 700 ಗ್ರಾಂ ಇತ್ತು.
ಶ್ವಾಸಕೋಶ ಬೆಳವಣಿಗೆಯಾಗದೇ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಕಣ್ಣು, ಕಿವಿ, ರಕ್ತದೊತ್ತಡ ಹೀಗೆ ನಾನಾ ಭಾಗಗಳು ಬೆಳವಣಿಗೆ ಆಗದ ಕಾರಣ ಮಗುವಿನ ಮೇಲಿನ ಆಸೆಯನ್ನ ಪೋಷಕರು ಕೈ ಚೆಲ್ಲಿದ್ದರು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ವೆಚ್ಚವೂ ಸಹ ದುಬಾರಿಯಾಗಿತ್ತು. ಲಕ್ಷಾಂತರ ರೂ. ಮೊದಲೇ ಕಳೆದುಕೊಂಡಿದ್ದ ಪೋಷಕರು ಕೊನೆಗೆ ನಿರಾಸೆ ಭಾವನೆಯಿಂದ ಗದಗ ಜಿಮ್ಸ್ಗೆ ದಾಖಲಿಸಿದ್ದರು. ಆದರೆ ಗದಗ ಜಿಮ್ಸ್ ವೈದ್ಯರ ಚಮತ್ಕಾರ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಕೃತಕ ಗರ್ಭ ಸೃಷ್ಟಿಸಿ ಮಗುವಿಗೆ ಚಿಕಿತ್ಸೆ: ಮಗುವಿನ ದೇಹ ಬೆಳವಣಿಗೆಯಾಗಿರಲಿಲ್ಲ. ಇದರಿಂದಾಗಿ ಗರ್ಭದಲ್ಲಿ ಯಾವ ರೀತಿ ಮಗು ಬೆಳೆಯುತ್ತೋ ಅದೇ ರೀತಿ ಕೃತಕ ಗರ್ಭಧಾರಣೆಯ ವಾತಾವರಣ ಸೃಷ್ಟಿ ಮಾಡಿ ಮಗುವಿಗೆ ಗದಗ ಜಿಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸತತ ಮೂರು ತಿಂಗಳ ಕಾಲ ಜಿಮ್ಸ್ ಕಾಂಗರೂ ಮದರ್ ಕೇರ್ ಘಟಕದಲ್ಲಿ ವಿಶೇಷ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಆರಂಭದಲ್ಲಿ ಶ್ವಾಸಕೋಶ ಬೆಳವಣಿಗೆಯಾಗುವವರೆಗೂ ವೆಂಟಿಲೇಟರ್ ಮೇಲೆ ಶ್ವಾಸಕೋಶದ ಜಾಗದವರೆಗೆ ಪೈಪ್ಗಳನ್ನ ಹಾಕಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.
Ventilator, Cpap, hfnc, oxygen ನಂತಹ ವಿವಿಧ ರೀತಿಯ ಆಯಾಮಗಳಲ್ಲಿ ಮಗುವಿಗೆ ಸತತವಾಗಿ ಹಗಲು ರಾತ್ರಿ ಇಡೀ ಒಂದು ದೊಡ್ಡ ಟೀಮ್ ಚಿಕಿತ್ಸೆ ನೀಡಿ ಮಗುವಿನ ತೂಕ ಹೆಚ್ಚಿಸಿದ ಪರಿಣಾಮ ಈಗ ಅಮ್ಮನ ಮಡಿಲಲ್ಲಿ ಮಗು ಜೋಗುಳದ ಹಾಡು ಕೇಳುವಂತಾಗಿದೆ. ಈ ಮೂಲಕ ಪೋಷಕರು, ವೈದ್ಯರನ್ನು ದೇವರ ಹಾಗೆ ಕಾಣುತ್ತಿದ್ದಾರೆ. ಯಾಕೆಂದರೆ ಈ ದಂಪತಿಗೆ ನಾಲ್ಕು ವರ್ಷಗಳ ಕಾಲ ಮಕ್ಕಳು ಆಗಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಗರ್ಭ ಧರಿಸಿದ್ದ ತಾಯಿಗೆ ಚೊಚ್ಚಲ ಹೆರಿಗೆಯಲ್ಲೇ ಅವಳಿ ಮಕ್ಕಳು ಜನಿಸಿದ್ದವು.
ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಅಕಾಲಿಕ ಹೆರಿಗೆಯಾಗಿ ಇಷ್ಟೆಲ್ಲ ತೊಂದರೆ ಅನುಭವಿಸಬೇಕಾಯಿತು ಅಂತಾರೆ ರಾಜೇಶ್ವರಿ ಚಿಕ್ಕನಗೌಡ. ಇನ್ನು ಈ ರೀತಿಯ ಮಗುವಿನ ಚಿಕಿತ್ಸೆ ಜಿಮ್ಸ್ನಲ್ಲಿ ಇದೇ ಮೊದಲ ಬಾರಿಯೇನಲ್ಲ. ನಾಲ್ಕು ವರ್ಷಗಳ ಹಿಂದೆಯೂ ಸಹ 560 ಗ್ರಾಂ ತೂಕದ ಮಗುವಿಗೂ ಸಹ ಚಿಕಿತ್ಸೆ ನೀಡಿ ಜೀವ ನೀಡಿದ್ದರು. ಆ ಮಗು ಈಗ ಆರೋಗ್ಯವಾಗಿದ್ದು, ಎಲ್.ಕೆ.ಜಿ ಗೆ ಓದುತ್ತಿದೆ. ಹೀಗೆ ಕಡಿಮೆ ತೂಕದ ಮಕ್ಕಳಿಗೆ ಸಹ ಚಿಕಿತ್ಸೆ ನೀಡಿ ವೈದ್ಯರು ಮರುಜನ್ಮ ನೀಡಿದ್ದಾರೆ. ಹೀಗಾಗಿ ಹಲವು ಪೋಷಕರು ಜಿಮ್ಸ್ ವೈದ್ಯರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರ ಈ ಕಾರ್ಯ ಎಲ್ಲರೂ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಹೆರಿಗೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿನಿ: ಮಗು ಸಾವು, ತಾಯಿ ಪ್ರಾಣಕ್ಕೂ ಕುತ್ತು!