ಗದಗ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಅನ್ನೋ ಸರ್ಕಾರದ ನೂತನ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 10-30 ಕ್ಕೆ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ನೇರವಾಗಿ ಗ್ರಾಮದ ಅಂಗನವಾಡಿಗೆ ತೆರಳಿ ಅಲ್ಲಿದ್ದ ಪುಟ್ಟ ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭಕೋರಿದರು.
ನಂತರ ಚುರ್ಚಿಹಾಳ ಹಾಗೂ ಕದಾಂಪೂರ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿದರು. ಕದಾಂಪುರ ಗ್ರಾಮದ ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ, ಶಾಲೆಯ ಮಕ್ಕಳು ನಮಗೆ ಶಾಲೆಗೆ ಬರಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲಾ ಎಂದು ಜಿಲ್ಲಾಧಿಕಾರಿಗಳ ಮುಂದೆ ಸಮಸ್ಯೆ ತೋಡಿಕೊಂಡ್ರು. ಇದಕ್ಕೆ ಸ್ಪಂದಿಸಿದ ಡಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ನಂತರ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಗ್ರಾಮದ ದಲಿತ ಕೇರಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ರು. ಈ ವೇಳೆ, ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಏಕಾಏಕಿ ತೆರಳಿದ ಡಿಸಿ ಕಾಯಿನ್ ಹಾಕುವ ಮೂಲಕ ಶುದ್ಧ ನೀರಿನ ಘಟಕ ಪರೀಕ್ಷೆ ನಡೆಸಿದರು. ಒಂದಾದ ಮೇಲೆ ಒಂದರಂತೆ ಕಾಯಿನ್ಗಳನ್ನು ಹಾಕಿದರೂ ಕೂಡಾ ನೀರು ಮಾತ್ರ ಬರಲಿಲ್ಲ.
ಈ ವೇಳೆ, ಶುದ್ಧ ಕುಡಿಯುವ ನೀರಿನ ಘಟಕ ಚೆನ್ನಾಗಿದೆ ಅಂತ ಹೇಳಿದ್ದ ಅಧಿಕಾರಿಗಳು ಮುಖಭಂಗ ಅನುಭವಿಸುವಂತಾಯಿತು. ಸಾಕಷ್ಟು ಪೇಚಾಟ ನಡೆಸಿದ್ರೂ ಶುದ್ಧ ನೀರು ಬರದಿದ್ದಕ್ಕೆ ಡಿಸಿ ಬೇಸರಗೊಂಡು ನಾನು ಈ ರಸ್ತೆಯಲ್ಲಿ ಮರಳಿ ಬರುವಷ್ಟರಲ್ಲಿ ರಿಪೇರಿ ಮಾಡಿ ಅಂತ ಹೇಳಿ ಮುನ್ನೆಡೆದ್ರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ಸುಂದರೇಶ ಬಾಬು ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಯಿದ್ದು, ಎಲ್ಲವನ್ನೂ ಒಮ್ಮೆಲೆ ಬಗೆಹರಿಸಲು ಸಾಧ್ಯವಿಲ್ಲ. ಕೆಲವೊಂದು ಸಮಸ್ಯೆಗಳಿಗೆ ಕಾಲಾವಕಾಶ ಬೇಕಾಗುತ್ತದೆ. ಅವೆಲ್ಲವನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ರು.