ಗದಗ : ಕರ್ತವ್ಯಲೋಪ ಹಿನ್ನೆಲೆ ಡಂಬಳ ಗ್ರಾಮ ಪಂಚಾಯತ್ನ ಹಿಂದಿನ ಪ್ರಭಾರ ಪಿಡಿಒ ಎಸ್.ಕೆ. ಕವಡೇಲಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಸುಶೀಲಾ ಬಿ ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಎಸ್.ಕೆ. ಕವಡೇಲಿ ಅವರು ಸದ್ಯ ಕೊರ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿದ್ದರು. ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದಾಗ ಕರ್ತವ್ಯಲೋಪ ಎಸಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಎಂಬುವರು ಗದಗ ಜಿಪಂ ಸಿಇಒ ಮತ್ತು ಮುಂಡರಗಿ ತಾಪಂ ಇಒ ಅವರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಈ ವೇಳೆ, ಹಲವು ಪ್ರಕರಣಗಳಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿತ್ತು. ಈ ಹಿನ್ನೆಲೆ ಎಸ್.ಕೆ. ಕವಡೇಲಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಬುದ್ಧೀನ್ ಕವಡೇಲಿ ಅವರು ವರ್ಗಾವಣೆ ಮತ್ತು ಇವರ ಅಧಿಕಾರ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರದ ಜಾಗಗಳನ್ನು ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದ್ದಾರೆ. ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಎಂಬುವರು ಜಿಪಂ ಸಿಇಒ ಮತ್ತು ಮುಂಡರಗಿ ತಾಪಂ ಇಒ ಅವರಿಗೆ ದೂರು ಸಲ್ಲಿದ್ದರು.
ಈ ಬಗ್ಗೆ ತನಿಖಾಧಿಕಾರಿಗಳ ತಂಡ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತ್ತು. ಆರೋಪ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಶಾಬುದ್ಧೀನ್ ಕವಡೇಲಿ ಸದ್ಯ ಕೊರ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿದ್ದರು. ಇವರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಅಮಾನತು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರದುರ್ಗದಲ್ಲಿ ಕುಡಿದು ಕರ್ತವ್ಯ ಲೋಪ ಎಸಗಿದ ಪಿಡಿಒ ಅಮಾನತು: ಇನ್ನೊಂದು ಪ್ರಕರಣದಲ್ಲಿ ಮದ್ಯಪಾನ ಮಾಡಿ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತ್ನ ಪಿಡಿಒ ಎಸ್.ಹನುಮಂತಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಜನವರಿ 7 ರ ಬೆಳಗ್ಗೆ 11 ಗಂಟೆ ಸುಮಾರಿಗೆ ಪಿಡಿಒ ಮದ್ಯ ಸೇವಿಸಿ ಚಳ್ಳಕೆರೆ ನಗರದ ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಈ ಹಿಂದೆ ಘನತ್ಯಾಜ್ಯ ನಿರ್ವಹಣೆಯಲ್ಲಿ ಕಸ ಸಂಗ್ರಹಣೆಯ ವಾಹನ ಬಳಕೆ ಮಾಡದೇ ಕರ್ತವ್ಯ ಲೋಪ ಎಸಗಿದ್ದರು. ಇಷ್ಟೇ ಅಲ್ಲದೆ ಜನ ಸಂಜೀವಿನಿ ಕ್ರಿಯಾ ಯೋಜನೆ ಜಾರಿ, ಕರ್ತವ್ಯಕ್ಕೆ ಗೈರು ಸೇರಿದಂತೆ ವಿವಿಧ ಕಾರಣಕ್ಕೆ ಸೆಪ್ಟೆಂಬರ್ನಲ್ಲಿ ತಾಲೂಕು ಪಂಚಾಯತ್ ಕಾರ್ಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ಗೂ ಇವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಈ ಹಿನ್ನೆಲೆ ಅಂದಿನ ಜಿಲ್ಲಾ ಪಂಚಾಯತ್ನ ಸಿಇಒ ಡಾ.ಕೆ.ನಂದಿನಿದೇವಿ ಅವರು ಎಸ್.ಹನುಮಂತ್ ಕುಮಾರ್ ಅವರನ್ನು ಅಮಾನತು ಆದೇಶಿಸಿದ್ದರು. ಒಂದು ತಿಂಗಳ ಬಳಿಕ ಮತ್ತೆ ಗ್ರಾಮ ಪಂಚಾಯತಿಗೆ ಪುನರ್ ನೇಮಕ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಇನ್ನು ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ ಹಾಜರಾತಿ ಪರಿಶೀಲನೆ ನಡೆಸಿದಾಗ ಅಧಿಕಾರಿಯು ಯಾವುದೇ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡುಬಂದಿದೆ. ಈ ಹಿನ್ನಲೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ಚಿತ್ರದುರ್ಗ: ಕುಡಿದು ತೇಲಾಡಿ ಕರ್ತವ್ಯ ಮರೆತ ಪಿಡಿಒ ಅಮಾನತು