ಗದಗ: ಜಮೀನು ಮತ್ತು ನಿವೇಶನ ನೀಡುತ್ತೇನೆ ಅಂತ ಫೈನಾನ್ಸ್ ಕಂಪನಿ ಮೂಲಕ ಜನರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ರಾಜೀವ್ಗಾಂಧಿ ನಗರದ ನಿವಾಸಿ ಪುಟ್ಟರಾಜ್ ಫೈನಾನ್ಸ್ ಕಾರ್ಪೊರೇಷನ್ ಮಾಲೀಕ ವಿಜಯ ರಾಘವೇಂದ್ರ ಸಿಂಧೆ ಈಗ ಪೊಲೀಸರ ಅಥಿತಿಯಾಗಿದ್ದಾರೆ.
ನಗರದ ಕಳಸಾಪುರ ರಸ್ತೆಯ ನಿವಾಸಿ ಸಂತೋಷ್ ಪ್ರಭಾಕರ ಮುಟಗಾರ್ ಅವರು ಜೂನ್ 3ರಂದು ನೀಡಿದ ದೂರಿನ ಮೇರೆಗೆ ವಿಜಯ್ ಅವರನ್ನ ಬಂಧಿಸಿದ್ದಾರೆ. ಫೈನಾನ್ಸ್ ಕಂಪನಿಯಲ್ಲಿ ಹಣ ಮತ್ತು ಚಿನ್ನ ಠೇವಣಿ ಮಾಡಿದ್ರೆ ಉತ್ತಮ ಲಾಭ ನೀಡಲಾಗುವುದು ಅಂತ ನಂಬಿಸಿ ಸಂತೋಷ್ ಮುಟಗಾರ್ ಅವರಿಂದ 2020 ಅಕ್ಟೋಬರ್ 1 ರಂದು ಆರೋಪಿ ರಾಘವೇಂದ್ರ 10 ಲಕ್ಷ ರೂ. ಮತ್ತು 407 ಗ್ರಾಂ ಚಿನ್ನವನ್ನ ತೆಗೆದುಕೊಂಡಿದ್ದರಂತೆ. ಆದರೆ ಇಲ್ಲಿಯವರೆಗೆ ಹಣ ಹಿಂದಿರುಗಿಸಿರಲಿಲ್ಲ. ಹಣ ಕೇಳಿದ್ರೆ ಇಲ್ಲದ ಕಾರಣ ಹೇಳಿ ಸತಾಯಿಸಿದ್ದರು ಎಂದು ದೂರು ದಾಖಲಾಗಿತ್ತು.
15 ದಿನದ ಬಳಿಕ ಬಾ, ತಿಂಗಳು ಬಳಿಕ ಬಾ ಅಂತ ಹೀಗೆ ಹಣ ಮತ್ತು ಚಿನ್ನಕ್ಕಾಗಿ ಗೋಳಾಡಿಸಿದ್ದರಂತೆ. ಹೀಗಾಗಿ ಸಂತೋಷ್ ಪೊಲೀಸರ ಮೊರೆ ಹೋಗಿದ್ದರು. ಇದಷ್ಟೇ ಅಲ್ಲದೆ ಇನ್ನೂ ಸುಮಾರು 25 ಜನರಿಗೆ ಪಿಗ್ಮಿ ಮತ್ತು ಠೇವಣಿ ಇಟ್ಟರೆ ಕಡಿಮೆ ಬೆಲೆಯಲ್ಲಿ ನಿವೇಶನ ಮತ್ತು ಜಮೀನು ನೀಡುವುದಾಗಿ ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಮಗು ಕಳ್ಳತನಕ್ಕೆ ಯತ್ನಿಸಿದ ಕಿರಾತಕ.. ಕಳ್ಳನನ್ನು ಬೆನ್ನಟ್ಟಿ ಪುತ್ರನನ್ನು ರಕ್ಷಿಸಿದ ತಾಯಿ