ಗದಗ: ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಹಣವನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಬಡ ಮಹಿಳೆಯರು ಸೇರಿದಂತೆ ನೂರಾರು ಜನರಿಂದ ಕೋಟಿಗಟ್ಟಲೇ ಹಣ ಪಡೆದು ವಂಚನೆ ಎಸಗಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಜನಸ್ನೇಹಿ ರಿಯಲ್ ವೆಲ್ತ್ ಸೊಲ್ಯೂಷನ್ಸ್ ಪ್ರೈ.ಲಿ. ಕಂಪನಿ ಎಂಬ ಹೆಸರಿನ ಕಂಪನಿಯೊಂದು ಏಜೆಂಟರ್ಗಳ ಮೂಲಕ ನೂರಾರು ಜನರಿಂದ ದುಡ್ಡು ಪಡೆದು ಹಣವನ್ನು ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಿದೆ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಕಂಪನಿ ಅಧಿಕಾರಿಗಳ ಮಾತಿಗೆ ಮರುಳಾಗಿ ನೂರಾರು ಮಹಿಳೆಯರು ಕೂಲಿ ನಾಲಿ ಮಾಡಿ ಉಳಿತಾಯ ಮಾಡಿದ್ದ ಹಣವನ್ನು ಕಂಪನಿಗೆ ತುಂಬಿ ಕೈ ಸುಟ್ಟುಕೊಂಡಿದ್ದಾರೆ. ಇದೊಂದೆ ಗ್ರಾಮದಲ್ಲಿ ಸುಮಾರು 500 ಕ್ಕೂ ಅಧಿಕ ಮನೆಗಳಲ್ಲಿ 50 ಸಾವಿರದಿಂದ 1 ಲಕ್ಷಕ್ಕೂ ಅಧಿಕ ಮೊತ್ತದ ಪಾಲಿಸಿ ಮಾಡಿದ್ದಾರೆ. ಆದರೆ ಇದುವೆರೆಗೂ ಕಂಪನಿಯಿಂದ ಗ್ರಾಹಕರಿಗೆ ಒಂದು ನಯಾ ಪೈಸೆ ಕೂಡ ಹಿಂದಿರುಗಿ ಬಂದಿಲ್ಲವಂತೆ.
ಇತ್ತ ಕೋಟ್ಯಂತರ ಹಣವನ್ನು ಲೂಟಿ ಮಾಡಿ ಕಂಪನಿ ಮುಖ್ಯಸ್ಥರು, ಸಿಬ್ಬಂದಿ ಕಾಲ್ಕಿತ್ತಿದ್ದಾರೆ ಎನ್ನಲಾಗ್ತಿದ್ದು, ಹಣ ತುಂಬಿ ಮೋಸ ಹೋದ ಮಹಿಳೆಯರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ನಮಗೆ ಹಣ ವಾಪಸ್ ಕೊಡಿಸಿ ಎಂದು ಏಜೆಂಟರನ್ನು ಕೇಳಿದರೆ, ಅವರು ಹಣ ಕೊಟ್ಟವರಿಗೆ ಧಮ್ಕಿ ಹಾಕ್ತಿದ್ದಾರಂತೆ. ಈ ಸಂಬಂಧ ರೋಣದಲ್ಲಿದ್ದ ಕಂಪನಿಯ ಮ್ಯಾನೇಜರ್ ಆಗಿದ್ದ ಲೋಕೇಶ್ ಭಗವತಿ ಮತ್ತು ಏಜೆಂಟ್ ಸರೋಜ ಹಿರೇಮಠ ಫುಸಲಾಯಿಸಿ ಹಣ ಪಡೆದು ಈಗ ನಮಗೇನೂ ಗೊತ್ತಿಲ್ಲ. ನಮಗೂ ಮೋಸ ಆಗಿದೆ ಎಂದು ಮೊಸಳೆ ಕಣ್ಣೀರು ಹಾಕ್ತಿದ್ದಾರೆ ಎಂದು ಮೋಸ ಹೋದ ಜನರು ದೂರಿದ್ದಾರೆ.
ಈ ಸಂಬಂಧ ಗ್ರಾಹಕರು ಗದಗ ಶಹರ್ ಠಾಣೆಯಲ್ಲಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಾಗಿದೆ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸದನ ಸ್ವಾರಸ್ಯ: ಕಲಾಪದಲ್ಲಿ ಮಾತನಾಡುತ್ತಿದ್ದಾಗ ಕಳಚಿದ ಪಂಚೆ; ಸಿದ್ದರಾಮಯ್ಯ ಕೊಟ್ಟ ಕಾರಣ ಹೀಗಿತ್ತು..