ಗದಗ: ಕಾರ್ನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬದುಕುಳಿದು ಬಂದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೆಲೋಗಲ್ ಬಳಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಲಕ್ಷ್ಮೇಶ್ವರದಿಂದ ಹೆಬ್ಬಾಳ ಕಡೆಗೆ ಹೊರಟಿದ್ದರು. ನೆಲೋಗಲ್ ಬಳಿ ಹಳ್ಳವೊಂದು ತುಂಬಿ ಹರಿಯುತ್ತಿತ್ತು, ರಾತ್ರಿ ಸಮಯವಾದ್ದರಿಂದ ನೀರು ಕಡಿಮೆ ಇರಬಹುದು ಎಂದು ತಿಳಿದು ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ನೀರಿನ ರಭಸಕ್ಕೆ ಕಾರ್ ಕೊಚ್ಚಿ ಹೋಗುತ್ತಿದ್ದಂತೆ ನಾಲ್ವರೂ ಹೊರಗೆ ಜಿಗಿದು, ಈಜಿ ದಡ ಸೇರಿದ್ದಾರೆ. ಆಗ ಸ್ಥಳೀಯರು ಸಹ ಅವರ ರಕ್ಷಣೆಗೆ ಮುಂದಾಗಿದ್ದಾರೆ.
ಹೆಬ್ಬಾಳ ಗ್ರಾಮದ ಚನ್ನವೀರಗೌಡ ಪಾಟೀಲ, ಪ್ರಭು ಮನ್ಸೂರ್, ಬಸನಗೌಡ ತೆಗ್ಗಿನಮನಿ ಹಾಗೂ ಕನಕವಾಡ ನಿವಾಸಿ ವೀರೇಶ್ ಡಂಬಳ ಎಂಬುವವರು ಕಾರ್ನಲ್ಲಿದ್ದರು. ಅದೃಷ್ಟವಶಾತ್ ನಾಲ್ವರು ಪಾರಾಗಿದ್ದು, ಕಾರ್ ಮಾತ್ರ ತೇಲಿ ಹೋಗಿದೆ. ಸೇತುವೆಯಿಂದ ಸುಮಾರು ನೂರು ಮೀಟರ್ ದೂರದ ಚೆಕ್ ಡ್ಯಾಮ್ವರೆಗೆ ಕಾರ್ ತೇಲಿಹೋಗಿ ಅಲ್ಲಿ ಸಿಲುಕಿಕೊಂಡಿದೆ. ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಹಾಗೂ ಲಕ್ಷ್ಮೇಶ್ವರ ತಾಲೂಕು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಭಾರಿ ಮಳೆ, ಗಾಳಿ: ಉರುಳಿ ಬಿದ್ದ ತೆಂಗಿನ ಮರಗಳು, ವಿಳ್ಯೆದೆಲೆ ಬಳ್ಳಿಗಳು
ಮಳೆ ಪ್ರಮಾಣ ಜೋರಾಗುತ್ತಿರುವುದರಿಂದ ಚೆಕ್ ಡ್ಯಾಮ್ನಿಂದ ಕಾರ್ ಹೊರ ತೆಗೆಯುವುದು ಸದ್ಯಕ್ಕೆ ಕಷ್ಟವಾಗಿದೆ. ಮಳೆ ನಿಂತ ನಂತರ ಕಾರ್ ಹೊರತೆಗುವ ಲಕ್ಷಣಗಳಿವೆ. ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ಜನ ಓಡಾಡದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.