ಗದಗ: ಎಲ್ಲೆಡೆ ಬಿರು ಬಿಸಿಲಿನ ಆರ್ಭಟ. ಅದೆಷ್ಟೋ ಪ್ರಾಣಿ, ಪಕ್ಷಿಗಳ ಕಲರವ ಬಿಸಿಲಿನ ದಾಹಕ್ಕೆ ನಲುಗಿ ಹೋಗಿದೆ. ಭೂತಾಯಿಯ ಶಾಖದ ಒಡಲು ಮೂಕ ಪ್ರಾಣಿಗಳ ವೇದನೆಯನ್ನು ಕೇಳಿಸಿಕೊಳ್ಳದಂತಾಗಿದೆ. ಆದರೆ, ಸಹ್ಯಾದ್ರಿಯಲ್ಲಿ ಜನರು ಹಾಗೂ ಅರಣ್ಯ ಇಲಾಖೆ ಪ್ರಾಣಿ-ಪಕ್ಷಿಗಳ ಮೂಕ ಭಾಷೆಯನ್ನು ಅರ್ಥ ಮಾಡಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಮಳೆಗೆ ಹೆಸರಾಗಿದ್ದ ಕಪ್ಪತ್ತಗುಡ್ಡ ಪ್ರದೇಶದಲ್ಲೀಗ ನೀರಿಗೆ ಬರ ಎದುರಾಗಿದೆ. ಕಾಡು ಪ್ರಾಣಿ, ಪಕ್ಷಿಗಳ ದಾಹ ಹೆಚ್ಚಾಗಿ ಪರದಾಡುವಂತಾಗಿದೆ. ಹೀಗಾಗಿ ಕರ್ನಾಟಕದ ಸಹ್ಯಾದ್ರಿಯಲ್ಲಿ ಪ್ರಾಣಿಗಳು ದಾಹದಿಂದ ಬಳಲುತ್ತಿದ್ದು, ಅಲ್ಲಿನ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಸಹಕಾರದಲ್ಲಿ ಕಾಡು ಪ್ರಾಣಿಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ನವಿಲಿನ ವಯ್ಯಾರ, ಚಿರತೆ ಸೇರಿ ಕಾಡು ಪ್ರಾಣಿಗಳ ಕಲರವ ಜೋರಾಗಿದೆ.
ಇಡೀ ಕಪ್ಪತ್ತಗುಡ್ಡದಲ್ಲಿ ನೀರಿನ ಮೂಲ ಬತ್ತಿ ಹೋಗಿವೆ. ಕಾಡು ಪ್ರಾಣಿಗಳು ನೀರಿಗಾಗಿ ನಾಡಿಗೆ ಲಗ್ಗೆ ಇಡುವ ಮುನ್ನವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮಾನವೀಯತೆ ಮೆರೆದಿದೆ. ಟ್ಯಾಂಕರ್ ಮೂಲಕ ಅರಣ್ಯ ಇಲಾಖೆ ಕೊಳಗಳಿಗೆ ನೀರು ತುಂಬಿಸುತ್ತಿದೆ. ಇದರಿಂದ ನಿತ್ಯ ರಾತ್ರಿ ಕೊಳಕ್ಕೆ ನವಿಲು, ಚಿರತೆ, ಹಾವು, ಮುಳ್ಳು ಹಂದಿ, ಕಾಡುಹಂದಿ, ಪುನಗು ಬೆಕ್ಕು ಸೇರಿ ಹತ್ತಾರು ವನ್ಯ ಪ್ರಾಣಿಗಳು ಬಂದು ನೀರಿನ ದಾಹ ನೀಗಿಸಿಕೊಳ್ತಿವೆ.
ಪ್ರತಿ ವಾರಕ್ಕೆ 8 ಟ್ಯಾಂಕರ್ ನಷ್ಟು ನೀರು ಪೂರೈಸಲಾಗ್ತಿದೆ. ಈ ಕಾರ್ಯವನ್ನು ಶಿರಹಟ್ಟಿ ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಡಿಎಫ್ಓ ತಮ್ಮ ಸ್ವಂತ ಹಣದಿಂದ ಈ ಸೇವಾ ಕಾರ್ಯ ಮಾಡ್ತಿರೋದು ಶ್ಲಾಘನೀಯ. ಇದಕ್ಕೆ ಸರ್ಕಾರದ ಯಾವ ಅನುದಾನವೂ ಇಲ್ಲದಿದ್ರು, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ವ-ಇಚ್ಛೆಯಿಂದ ಸಮಾಜಮುಖಿ ಕೆಲಸ ಮಾಡ್ತಿದ್ದಾರೆ.
ಅರಣ್ಯಾಧಿಕಾರಿಗಳು ಕೇವಲ ಅರಣ್ಯ ರಕ್ಷಣೆ ಮಾಡದೇ ಅಲ್ಲಿರುವ ಪ್ರಾಣಿ-ಪಕ್ಷಿಗಳಿಗಳ ಮೇಲೆ ಪ್ರೇಮವನ್ನಿಟ್ಟುಕೊಂಡಿರೋದು ಹೆಮ್ಮೆಯ ವಿಷಯ. ಅಧಿಕಾರಿಗಳ ಈ ಮಾನವೀಯ ಕಾರ್ಯ ಎಲ್ಲರಿಗೂ ಮಾದರಿಯಾದ್ರೆ ಅದೆಷ್ಟೋ ವನ್ಯ ಸಂಪತ್ತು ರಕ್ಷಿಸಿದಂತಾಗುತ್ತೆ.