ಗದಗ : ಜಿಲ್ಲೆಯಲ್ಲಿ ನೆರೆಯಿಂದ ತೊಂದರೆಗೊಳಗಾಗಿರುವ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿ ಇಂದು ನೆರೆ ಸಂತ್ರಸ್ತರು ಮಾಜಿ ಶಾಸಕ ಬಿ. ಆರ್ . ಯಾವಗಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ನರಗುಂದದಲ್ಲಿ ಮಾಜಿ ಶಾಸಕ ಬಿ. ಆರ್ .ಯಾವಗಲ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಂತ್ರಸ್ತರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕುಗಳ 30 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೂರು ಬಾರಿ ಪ್ರವಾಹ ಬಂದಿದೆ. ಇದರಿಂದ ಜನರ ಬದುಕು ಬೀದಿಗೆ ಬಿದ್ದಿದ್ದು, ಇಷ್ಟಾದರೂ ಕೂಡ ಇವರ ಬದುಕು ನಿರ್ಮಿಸಿ ಕೊಡುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ ಮೇಲೆ ಹರಿಹಾಯ್ದ ಸಂತ್ರಸ್ತರು, ಈ ಹಿಂದೆ ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ನೆರೆಯಿಂದ ನಮ್ಮ ಬದುಕು ಹಾಳಾಗಿತ್ತು. ಈ ಬಾರಿಯೂ 17 ಜನ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಿಎಸ್ವೈ ಅಧಿಕಾರಕ್ಕೆ ಏರಿದ್ದಾರೆ. ಈಗಲೂ ಸಹ ನೆರೆಯಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಪರಿಹಾರ ಹಂಚಿಕೆಯಲ್ಲಿ ಹಾಗೂ ಮನೆ ಕಳೆದುಕೊಂಡವರನ್ನು ಗುರುತಿಸುವಲ್ಲಿ ತಾರತಮ್ಯ ಮಾಡಲಾಗಿದ್ದು, ಹೊಸ ಸರ್ವೇ ಮಾಡಿಸಿ ನಮಗೆ ಪರಿಹಾರ ಕೊಡೋದಾದ್ರೆ ಕೊಡಿ. ಇಲ್ಲವಾದ್ರೆ ನಿಮ್ಮ ಹತ್ರ ಬೇಡೋಕೆ ಬರಲ್ಲ ಎಂದು ತಮ್ಮ ಸಿಟ್ಟು ಹೊರ ಹಾಕಿದ್ರು.