ಗದಗ: ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದ್ರು.
ಘಟಿಕೋತ್ಸವದಲ್ಲಿ ಎಂಎ ಆರ್ಡಿಪಿಆರ್, ಎಂಬಿಎ, ಎಂಎಸ್ಸಿ ಸೇರಿ ಹಲವು ಸ್ನಾತಕೋತ್ತರ ವಿಭಾಗದ 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಚಿನ್ನದ ಬೇಟೆಯಾಡೋದ್ರಲ್ಲಿ ಇಲ್ಲೂ ಹುಡುಗಿಯರದ್ದೇ ಮೈಲುಗೈಯಾಗಿದೆ. 36 ಚಿನ್ನದ ಪದಕ ಗಿಟ್ಟಿಸಿದವ್ರಲ್ಲಿ 22 ವಿದ್ಯಾರ್ಥಿನಿಯರೇ ಇದ್ದಾರೆ.
ಕಾರ್ಯಕ್ರಮದಲ್ಲಿ ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಜಿ ಸಚಿವ ಎಚ್ ಕೆ ಪಾಟೀಲ್ ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಹಿರಿಯ ಐಎಎಸ್ ಡಾ. ಅಶೋಕ ದಳವಾಯಿ ಅವರಿಗೆ ಸಚಿವ ಕೆ ಎಸ್ ಈಶ್ವರಪ್ಪ ವಿವಿಯ ಪ್ರಥಮ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ರು.
ವಿಶ್ವವಿದ್ಯಾಲಯ ಆವರಣದೊಳಗಿನ ಗ್ರಾಮೀಣ ಸೊಗಡಿನ ಕಲಾಕೃತಿಗಳು ಎಲ್ಲರ ಗಮನ ಸೆಳೆದವು. ಅಂದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೇಗೆ ನಡೆಯುತ್ತಿದ್ದವು ಅನ್ನೋ ಕಲಾಕೃತಿ ನೋಡಿದ ಪ್ಯಾಟಿ ಯುವತಿಯರು ಸೀರೆ ತೊಟ್ಟು ನಾವು ಒಂದು ಕೈ ನೋಡೋಣ ಅಂತ ರಾಶಿ ಮಾಡಿದ್ರು. ಮತ್ತೊಂದು ಕಡೆ ಗ್ರಾಮೀಣ ಭಾಗದ ಗುಡಿ ಕೈಗಾರಿಕೆ ದೃಶ್ಯಗಳು ಬಂದವರ ಕಣ್ಮನ ಸೆಳೆದವು. ಹೀಗೆ ಹಲವಾರು ಗ್ರಾಮೀಣ ಸೊಗಡಿನ ಅನಾವರಣದ ದೃಶ್ಯಗಳು ಈಗಿನ ಪೀಳಿಗೆಯ ಮನಸೂರೆಗೊಂಡವು.
ಈ ಘಟಿಕೋತ್ಸವದಲ್ಲಿ ಗ್ರಾಮೀಣ ಕಲೆ, ಸಂಸ್ಕೃತಿಯ ಲೋಕವೇ ಅನಾವರಣಗೊಂಡಿತ್ತು. ಬಂದವರಿಗೆ ಇದು ಘಟಿಕೋತ್ಸವ ಕಾರ್ಯಕ್ರಮವೋ ಅಥವಾ ಗ್ರಾಮೀಣ ಸೊಗಡಿನ ಹಬ್ಬವೋ ಎಂಬಂತೆ ಭಾಸವಾಗಿತ್ತು. ಘಟಿಕೋತ್ಸವ ಹಿನ್ನೆಲೆ ಎಲ್ಲ ಹುಡುಗಿಯರು ಪಕ್ಕಾ ಹಳ್ಳಿಯ ಶೈಲಿಯ ಅದು ಪಕ್ಕಾ ಖಾದಿ ಬಟ್ಟೆಯ ಸೀರೆ ಉಟ್ಟು ಶೃಂಗಾರಗೊಂಡಿದ್ರು. ಈ ವಿದ್ಯಾರ್ಥಿನಿಯರು ಖಾದಿ ಸೀರೆ ಉಟ್ಟು ಬಂದ್ರೆ, ವಿದ್ಯಾರ್ಥಿಗಳು ನೆಹರು ಶರ್ಟ್, ಖಾದಿ ಪ್ಯಾಂಟ್, ಗಾಂಧಿ ಟೋಪಿ ಹಾಕಿಕೊಂಡು ಬಂದಿದ್ರು.
2018-19 ಮತ್ತು 2019-20 ಸಾಲಿನ ಒಟ್ಟು 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಇದ್ರಲ್ಲಿ ಚಿನ್ನದ ಪದಕ ಪಡೆದವ್ರು ಒಟ್ಟು 36 ವಿದ್ಯಾರ್ಥಿಗಳು. 22 ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 14 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ.