ಗದಗ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆಗೆ ಮುಂದಾದ ಘಟನೆ ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನಡೆದಿದೆ. ಬಾಲಕಿ ವೇಲ್ ಧರಿಸಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಬಳಿಕ ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ಅಸ್ವಸ್ಥನಾಗಿದ್ದ ವಿದ್ಯಾರ್ಥಿಯನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ರಾತ್ರಿ ಅಸುನೀಗಿದ್ದಾನೆ.
ಇತ್ತ ವಿದ್ಯಾರ್ಥಿನಿ ಸಹ ಮನನೊಂದು ಕೋಳಿವಾಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಮನೆಯವರು ಅವರನ್ನ ರಕ್ಷಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಸ್ಥಿತಿಯೂ ಸಹ ಚಿಂತಾಜನಿಕವಾಗಿದೆ ಎಂದು ಹೇಳಲಾಗ್ತಿದೆ.
ಅಂದಹಾಗೆ ಇವರಿಬ್ಬರೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದವರು. ಗದಗ ತಾಲೂಕಿನ ಮುಳಗುಂದ ಪಟ್ಟಣದ ಕಾಲೇಜ್ವೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಮುಳಗುಂದ ಪಟ್ಟಣ ಕೋಳಿವಾಡ ಗ್ರಾಮಕ್ಕೆ ಹತ್ತಿರ ಆಗ್ತಿದ್ದರಿಂದ ಅಲ್ಲಿಗೆ ಕಾಲೇಜ್ಗೆ ಹೋಗ್ತಿದ್ದರು. ಸ್ನೇಹಿತರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಿಯತಮೆಗೆ ಬಾಲಕ ಹೊಸ ಬಟ್ಟೆ ಕೊಡಿಸಿದ್ದ. ಆದರೆ, ಬಾಲಕಿ ಚೂಡಿ ಹಾಕಿದ್ದರೂ ವೇಲ್ ಧರಿಸಿರಲಿಲ್ಲವಂತೆ. ಹೀಗಾಗಿ, ವೇಲ್ ಯಾಕೆ ಧರಿಸಿಲ್ಲ ಅಂತ ಬೇಜಾರು ಮಾಡಿಕೊಂಡ ಬಾಲಕ, ಆಕೆಯೊಂದಿಗೆ ಕ್ಯಾತೆ ತೆಗೆದಿದ್ದಾನೆ.
ಪರಸ್ಪರ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಬಳಿಕ ಇದೇ ಬೇಸರದಲ್ಲಿ ವಿದ್ಯಾರ್ಥಿ ಮನನೊಂದು ಉಣ್ಣೆಗೆ ಸಿಂಪಡಿಸುವ ಔಷಧ ಸೇವಿಸಿದ್ದಾನೆ. ಖಾಲಿ ಹೊಟ್ಟಿಯಲ್ಲಿ ವಿಷ ಸೇವಿಸಿದ್ದರಿಂದ ಬಾಲಕನ ಸ್ಥಿತಿ ತುಂಬಾ ಸೀರಿಯಸ್ ಆಗಿದ್ದು, ಜಿಮ್ಸ್ಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕು ಬೀಸಿ ಯುವಕನ ಹುಚ್ಚಾಟ: 8 ಜನರಿಗೆ ಗಾಯ, ಆರೋಪಿ ವಶಕ್ಕೆ