ಗದಗ: ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೆ ಸರ್ಕಾರ ಕೊಟ್ಟಿದ್ದ ಹಕ್ಕು ಪತ್ರವನ್ನ ಅಧಿಕಾರಿಗಳು ಫಲಾನುಭವಿಗಳಿಗೆ ಸಿಗದಂತೆ ಮಾಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಗದಗ ಜಿಲ್ಲಾಧಿಕಾರಿಗಳ ಎದುರು ನೆರೆದಿದ್ದ ರೈತರು ಮತ್ತು ಜಕ್ಕಲಿ ಗ್ರಾಮದ ಸುಮಾರು 40 ಫಲಾನುಭವಿಗಳು ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 40 ವರ್ಷಗಳಿಂದ ಕೋರ್ಟ್ನಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದರೆ ನೀವೇನು ಮಾಡಿದ್ರಿ?. ನಿಮ್ಮಂತ ಐದು ಜನ ಡಿಸಿಗಳನ್ನ ನೋಡಿದ್ದೇವೆ. ಆ ಜಾಗದಲ್ಲಿ ನಮ್ಮ ಹೆಣ ಬಿದ್ರೆ ನೀವು ಒಪ್ಪಿಕೊಳ್ತೀರಾ? ಎಂದು ಕಿಡಿಕಾರಿದರು.
ಪ್ರಕರಣದ ವಿವರ: 1992ರಲ್ಲಿ ಶೆಟ್ಟಿ ಎಂಬುವರು 1 ಎಕರೆ ಜಮೀನನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದರು. ಆ ಜಾಗದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ್ದರು. ಆದರೆ ಖರೀದಿ ದಾಖಲೆಗಳು ನಾಪತ್ತೆಯಾಗಿವೆಯಂತೆ. ಹೀಗಾಗಿ ಜಮೀನಿನ ಮಾಲೀಕ ಮರಳಿ ತಮ್ಮ ಜಮೀನನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದ್ದಾನೆ.
ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ರಾಜ್ಯಪಾಲರ ಹೆಸರಲ್ಲಿ ಖರೀದಿ ಮಾಡಿದ್ದ ದಾಖಲೆ ವರದಿ ಕಳೆದುಹೋಗಿವೆ ಎನ್ನುತ್ತಿದ್ದಾರಂತೆ. ಹೀಗಾಗಿ ಸುದೀರ್ಘ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಕ್ಕರೂ ನಿವೇಶನ ಸಿಗುತ್ತಿಲ್ಲ. ಇದರಿಂದ ರೋಸಿ ಹೋಗಿರುವ ರೈತರು ಜಿಲ್ಲಾಧಿಕಾರಿಗಳ ನಡೆ ವಿರುದ್ಧ ಕಿಡಿಕಾರಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 13 ವರ್ಷದ ಬಾಲಕನನ್ನು ಬೆದರಿಸಿ 3 ಮೊಬೈಲ್ ಫೋನ್ ಹ್ಯಾಕ್ ಮಾಡಿದ ಕಿರಾತಕರು